ಮಂಗಳೂರು: ನಗರದ ಕುಡುಪುವಿನ ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಡೆದ ಗುಂಪಿನಿಂದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ.
ಈ ಮೂಲಕ ಬಂಧಿತರ ಸಂಖ್ಯೆ 20ಕ್ಕೆ ಏರಿದೆ. ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಹಾಗೂ ಆದರ್ಶ್ ಬಂಧಿತ ಐವರು ಆರೋಪಿಗಳು. ಕೇರಳದ ವಯನಾಡು ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಅಶ್ರಫ್ ಹತ್ಯೆಗೀಡಾದ ವ್ಯಕ್ತಿ. ಈತನ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯ ಬಂಧನ ಆಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿ (ಅಪರಾಧ ಸಂಖ್ಯೆ 37/2025, ಯು/ಎಸ್ 302 ಐಪಿಸಿ), ಇನ್ನೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 20ಕ್ಕೆ ಏರಿದೆ. ಇದಲ್ಲದೆ, ಕೊಲೆಯಾದ ವ್ಯಕ್ತಿಯನ್ನು ಅಶ್ರಫ್ ಎಂದು ಗುರುತಿಸಲಾಗಿದೆ ಎಂದು ಹೇಳಿದರು.