ಆರೋಗ್ಯ ಸುದ್ದಿ

ಪೌರಕಾರ್ಮಿಕರ ಕಾಲೋನಿಗೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಭೇಟಿ

Share It

ಬೆಂಗಳೂರು: ಮಹದೇಪುರ ವಲಯ ವ್ಯಾಪ್ತಿಯಲ್ಲಿ‌ ಪೌರಕಾರ್ಮಿಕರು ವಾಸಿಸುವ ಕಾಲೋನಿಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ತೆರಳಿ ಅವರ ಕುಂದು-ಕೊರತೆಗಳನ್ನು ಆಲಿಸಿದ್ದಾರೆ.

ಮಹದೇಪುರ ವಲಯ ಕೆ.ಆರ್.ಪುರ ವಿಭಾಗ ವಿಜ್ಞಾನನಗರ ವಾರ್ಡ್ ನಲ್ಲಿ ಬರುವ ಪೌರಕಾರ್ಮಿಕ ಕಾಲೋನಿಗೆ ತೆರಳಿ ಅವರ ಕುಂದು-ಕೊರತೆಗಳು ಸೇರಿ ಇನ್ನಿತರೆ ವಿಷಯಗಳ ಕುರಿತು ಸುಧೀರ್ಘವಾಗಿ ಪೌರಕಾರ್ಮಿಕರೊಂದಿಗೆ ಕುಳಿತು ಚರ್ಚಿಸಿದರು.

ನಗರದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಏನೇನು ಸಮಸ್ಯೆಗಳಿವೆ, ವೇತನ, ಇ.ಎಸ್.ಐ ಹಾಗೂ ಫಿಎಫ್ ಸರಿಯಾಗಿ ಪಾವತಿಯಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಸಮಾಜ ಕಲ್ಯಾಣ ವಿಭಾಗದಡಿ ಪೌರಕಾರ್ಮಿಕರಿಗಾಗಿ ಸಾಕಷ್ಟು ಯೋಜನೆಗಳಿದ್ದು, ಆ ಎಲ್ಲಾ ಯೋಜನೆಗಳು ಪೌರಕಾರ್ಮಿಕರಿಗೆ ಸರಿಯಾಗಿ ತಲುಪುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹದೇಪುರ ವಲಯ ವ್ಯಾಪ್ತಿಯಲ್ಲಿ ಸುಮಾರು 1700 ಪೌರಕಾರ್ಮಿಕರು ನೇರ ವೇತನದಡಿ ಕಾರ್ಯ ನಿರ್ವಹಿಸುತ್ತಿದ್ದು, ಖಾಯಂ ಮಾಡುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ಇದಕ್ಕೆ ಮಹದೇವಪುರ ವಲಯದ ಜಂಟಿ ಆಯುಕ್ತರಾದ ದಾಕ್ಷಾಯಿಣಿ ಪ್ರತಿಕ್ರಿಯಿಸಿ, ಮಹದೇವಪುರ ವಲಯದ 1,700 ನೇರ ವೇತನ ಪೌರಕಾರ್ಮಿಕರ ಅರ್ಜಿಗಳನ್ನು ಪಾಲಿಕೆ ಘನತ್ಯಾಜ್ಯ ವಿಭಾಗಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾಲೋನಿಯಲ್ಲಿ ವಾಸಿಸುವ ಪೌರಕಾರ್ಮಿಕರು ಮನೆಗಳನ್ನು ನಿರ್ಮಾಣ ಮಾಡಿಕೊಡಲು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಈ ಬರ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಈ ವೇಳೆ ಉಪ ಆಯುಕ್ತರಾದ ಮಧು, ಸಹಾಯಕ ಕಾರ್ಯಪಾಲಕ‌ ಅಭಿಯಂತರ ಶ್ರೀನಿಧಿ, ಸಫಾಯಿ ಕರ್ಮಾಚಾರಿ ಆಯೋಗದ ಅಧಿಕಾರಿಗಳು ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page