ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರ ಮತ್ತೊಂದು ಮಹತ್ವದ ಮೈಲುಗಲ್ಲು ತಲುಪಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ಮಲ್ಟಿ–ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಯ ಮೊದಲ ರಫ್ತು ಸಾಗಣೆ ನಾಗ್ಪುರದ ಉತ್ಪಾದನಾ ಘಟಕದಿಂದ ಯಶಸ್ವಿಯಾಗಿ ಹೊರಟಿದೆ.
44 ಸೆಕೆಂಡುಗಳಲ್ಲಿ ಒಂದೇ ಸಮಯಕ್ಕೆ 72 ರಾಕೆಟ್ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಸ್ನೇಹಪೂರ್ಣ ರಾಜತಾಂತ್ರಿಕ ಸಂಬಂಧಗಳ ಹಿನ್ನೆಲೆಯಲ್ಲಿಅರ್ಮೇನಿಯಾ ದೇಶಕ್ಕೆ ರಫ್ತು ಮಾಡಲಾಗಿದೆ.
ಪಿನಾಕಾ ರಾಕೆಟ್ ವ್ಯವಸ್ಥೆ ಭಾರತ ಸ್ವಾವಲಂಬಿ ರಕ್ಷಣಾ ತಂತ್ರಜ್ಞಾನಕ್ಕೆ ಉತ್ತಮ ಉದಾಹರಣೆಯಾಗಿದೆ. ಹೆಚ್ಚಿನ ನಿಖರತೆ, ವ್ಯಾಪಕ ದಾಳಿ ಸಾಮರ್ಥ್ಯ ಮತ್ತು ವೇಗದ ಪ್ರತಿಕ್ರಿಯೆ ಇದರ ಪ್ರಮುಖ ಲಕ್ಷಣಗಳು. ಪ್ರಸ್ತುತ ಈ ವ್ಯವಸ್ಥೆ 40 ಕಿಲೋಮೀಟರ್ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಬಲ್ಲದು. ಅಲ್ಲದೆ, ಇದರ ವ್ಯಾಪ್ತಿಯನ್ನು 120 ಕಿಲೋಮೀಟರ್ವರೆಗೆ ವಿಸ್ತರಿಸುವ ನವೀಕರಣ ಕಾರ್ಯವೂ ಅಂತಿಮ ಹಂತದಲ್ಲಿದೆ.
ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದ ಸಹಕಾರದಿಂದ ಅಭಿವೃದ್ಧಿಪಡಿಸಲಾದ ಪಿನಾಕಾ, ಯುದ್ಧಭೂಮಿಯಲ್ಲಿ ಶತ್ರು ಪಡೆಗೆ ಪ್ರತಿಕ್ರಿಯಿಸಲು ಅವಕಾಶವೇ ನೀಡದಂತಹ ತೀವ್ರ ದಾಳಿ ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಣಕ್ಕೆ ವಿದೇಶಿ ರಾಷ್ಟ್ರಗಳ ಗಮನ ಈ ವ್ಯವಸ್ಥೆಯತ್ತ ಸೆಳೆಯುತ್ತಿದೆ.
ಒಂದು ದಶಕದ ಹಿಂದೆ ಕೇವಲ 1,000 ಕೋಟಿ ರೂ.ಗಳ ಒಳಗಿದ್ದ ಭಾರತದ ಶಸ್ತ್ರಾಸ್ತ್ರ ರಫ್ತು ಮೌಲ್ಯ, ಇಂದು ಸುಮಾರು 24,000 ಕೋಟಿ ರೂ.ಗಳ ಮಟ್ಟವನ್ನು ತಲುಪಿದೆ. ಇದರಿಂದ ಭಾರತವು ಶಸ್ತ್ರಾಸ್ತ್ರ ಆಮದುದಾರ ದೇಶ ಎಂಬ ಗುರುತಿನಿಂದ ಹೊರಬಂದು, ಪ್ರಮುಖ ರಫ್ತುದಾರ ರಾಷ್ಟ್ರಗಳ ಸಾಲಿಗೆ ಸೇರಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪಿನಾಕಾದ ಶಕ್ತಿ: ಏಪ್ರಿಲ್ 2022ರಲ್ಲಿ ಯಶಸ್ವಿ ಪರೀಕ್ಷೆಗಳ ನಂತರ, ಪಿನಾಕಾ MK-I ಆವೃತ್ತಿಯನ್ನು ಭಾರತೀಯ ಸೇನೆ ತನ್ನ ಪಡೆಗೆ ಸೇರಿಸಿಕೊಂಡಿತು. ಆರಂಭದಲ್ಲಿ 37.5 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದ ಈ ರಾಕೆಟ್ ವ್ಯವಸ್ಥೆ, ಹಂತ ಹಂತವಾಗಿ 40, 75 ಕಿಲೋಮೀಟರ್ಗಳವರೆಗೆ ಸುಧಾರಿಸಲಾಯಿತು. ಡಿಸೆಂಬರ್ 2025ರಲ್ಲಿ 120 ಕಿಲೋಮೀಟರ್ ವ್ಯಾಪ್ತಿಯ ಪರೀಕ್ಷೆಯೂ ಯಶಸ್ವಿಯಾಗಿದೆ. ಒಂದೇ ಲಾಂಚರ್ನಿಂದ ವಿವಿಧ ದೂರದ ರಾಕೆಟ್ಗಳನ್ನು ಉಡಾಯಿಸುವ ಪ್ರಯೋಗಗಳು ಯಶಸ್ಸು ಕಂಡಿವೆ.
ಅರ್ಮೇನಿಯಾ ಜೊತೆಗಿನ ಒಪ್ಪಂದದ ವಿವರ: ಸೆಪ್ಟೆಂಬರ್ 2022ರಲ್ಲಿ ಭಾರತ ಮತ್ತು ಅರ್ಮೇನಿಯಾ ನಡುವಿನ ಒಪ್ಪಂದದಡಿ, ನಾಲ್ಕು ಬ್ಯಾಟರಿಗಳ ಪಿನಾಕಾ ಮಲ್ಟಿ–ಬ್ಯಾರೆಲ್ ರಾಕೆಟ್ ಲಾಂಚರ್ಗಳಿಗಾಗಿ ಸುಮಾರು 2,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಲ್ಲಿ ಟ್ಯಾಂಕ್ ವಿರೋಧಿ ರಾಕೆಟ್ಗಳು, ಮದ್ದುಗುಂಡುಗಳು ಹಾಗೂ ಅಗತ್ಯ ಸಹಾಯಕ ಉಪಕರಣಗಳೂ ಸೇರಿವೆ. ಪಿನಾಕಾ ವ್ಯವಸ್ಥೆಯ ಮೇಲೆ ಫ್ರಾನ್ಸ್ ಸೇರಿದಂತೆ ಇನ್ನೂ ಕೆಲವು ದೇಶಗಳು ಆಸಕ್ತಿ ವ್ಯಕ್ತಪಡಿಸಿರುವುದು ಗಮನಾರ್ಹ.
ಅರ್ಮೇನಿಯಾಗೆ ರಫ್ತು ಮಾಡಿದ ಹಿನ್ನಲೆ: ಅರ್ಮೇನಿಯಾ–ಅಜರ್ಬೈಜಾನ್ ನಡುವಿನ ಗಡಿ ವಿವಾದದ ಹಿನ್ನೆಲೆಯಲ್ಲಿ, ಅರ್ಮೇನಿಯಾ ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯದಲ್ಲಿದೆ. ಇತ್ತೀಚಿನ ಭೌಗೋಳಿಕ–ರಾಜಕೀಯ ಬೆಳವಣಿಗೆಗಳಲ್ಲಿ ಅಜರ್ಬೈಜಾನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವುದು ಭಾರತ–ಅರ್ಮೇನಿಯಾ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಈ ಹಿನ್ನಲೆಯಲ್ಲಿ, ಅರ್ಮೇನಿಯಾ ಸೇನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಭಾರತ ಪಿನಾಕಾ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ರಫ್ತು ಮಾಡಿದೆ.

