ಕೆ.ಆರ್.ಪುರ: ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಿಂದ ಪುರುಷತ್ವ ಕಳೆದುಕೊಳ್ಳುತ್ತೇವೆ ಎಂಬ ತಪ್ಪು ಕಲ್ಪನೆ ಪುರುಷರಲ್ಲಿ ಇರುವುದರಿಂದ ಅವರು ಚಿಕಿತ್ಸೆಗೆ ಮುಂದೆ ಬರುತ್ತಿಲ್ಲ ಎಂದು ಸಂತಾನ ಹರಣ ಶಸ್ತ್ರ ಚಿಕಿತ್ಸಕರಾದ ಡಾ. ಕಲಾವತಿ ಅವರು ತಿಳಿಸಿದರು.
ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಮಂಗಳವಾರ ನೆಡಯುವ ಪುರುಷ ಮತ್ತು ಮಹಿಳೆಯರ ಸಂತಾನ ಹರಣ ಶಸ್ತ್ರಚಿಕಿತ್ಸೆ ಶಿಬಿರವನ್ನು ನಡೆಸಿ ಕೊಡುತ್ತಿರುವ ವೈದ್ಯರನ್ನು ಸಾರ್ವಜನಿಕರು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅರವಳಿಕೆ ತಜ್ಞರು ಡಾ. ಸುರೇಂದ್ರ, ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲೂ ಲಿಂಗಭೇದ ಮುಂದುವರಿದಿದ್ದು, ಪುರುಷರನ್ನು ಮನವೊಲಿಸುವ ಪ್ರಯತ್ನದ ಜತೆ ಪ್ರತಿ ಪಿಎಚ್‌ಸಿಯಲ್ಲಿ ತಿಂಗಳಿಗೆ ಒಬ್ಬ ವ್ಯಕ್ತಿಯನ್ನಾದರೂ ಮನವೊಲಿಸಿ ಶಸ್ತ್ರ ಚಿಕಿತ್ಸೆ ಮಾಡುವ ಪ್ರಯತ್ನ ಇನ್ನೂ ಹೆಚ್ಚು ಮಾಡಬೇಕು ಎಂದು ಹೇಳಿದರು.
ಪತಿಯ ಆಪರೇಷನ್‌ಗೆ ಮೊದಲು ಪತ್ಮಿಯರೇ ಬೇಡ ಅನ್ನುತ್ತಾರೆ, ಸಿಜೇರಿಯನ್ ಆಗಿದ್ದರೂ ಅವರೇ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ, ಅದಕ್ಕೆ ಹಲವು ಕಾರಣಗಳಿವೆ. ಪುರುಷತ್ವ ಕಡಿಮೆ ಆಗಲಿದೆ ಎಂಬ ತಪ್ಪು ತಿಳಿವಳಿಕೆಯೂ ಇದ್ದು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ರವರು ಮಾತನಾಡಿ ಪುರುಷರು ಆಪರೇಷನ್‌ಗೆ ಹಿಂಜರಿದಿದ್ದು ವ್ಯಾಸೆಕ್ಟಮಿ ಎಂಬುದು ಸವಾಲಾಗಿದೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಎಂಬುದು ಮಹಿಳೆಗೆ ಮೀಸಲು ಎಂಬ ಸಮಾಜದ ದೃಷ್ಟಿಕೋನ ಬದಲಾಗಿಲ್ಲ ಮತ್ತು ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ ಗಾಯ, ಹೊಲಿಗೆ, ನೋವಿಲ್ಲದ ಶಸ್ತ್ರಚಿಕಿತ್ಸೆಯಾಗಿದ್ದು ಅತಿ ಸುಲಭ ವಿಧಾನವಾಗಿದೆ ಸಾರ್ವಜನಿಕರು ಈ ಸರ್ಕಾರಿ ಸೌಲಭ್ಯವನ್ನು ಪಡೆಯಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ರೆಡ್ಡಿ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ನೀಡುವ ಪ್ರೋತ್ಸಾಹಧನ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿದೆ. ಪುರುಷರಿಗೆ 1100 ರೂ. ನೀಡಿದರೆ, ಮಹಿಳೆಯರಿಗೆ
600 ರೂ.ಗಳು ನೀಡಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿನ ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ (ಎನ್.ಎಸ್.ವಿ) ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಪ್ರೇರೇಪಿಸಿದ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಶೈಲ ಕಣ್ಣಾಲ್, ಬೆಂಗಳೂರು ಪೂರ್ವ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಂದ್ಯಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋದಮ್ಮ, ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಕ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.