ಫೆಬ್ರವರಿಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಸಾಧ್ಯತೆ: ಬೆಂಗಳೂರು ಪ್ರಯಾಣಿಕರಿಗೆ ಮತ್ತೆ ಬೆಲೆ ಬಿಸಿ
ಬೆಂಗಳೂರು: ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಜನರು ನಮ್ಮ ಮೆಟ್ರೋವನ್ನು ಅವಲಂಬಿಸುತ್ತಿದ್ದಾರೆ. ನಗರ ವಿಸ್ತರಣೆಯ ಜತೆಗೆ ಮೆಟ್ರೋ ಜಾಲವೂ ಹೆಚ್ಚಾಗುತ್ತಿದ್ದು, ಇದು ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಿದೆ. ಆದರೆ, ಈ ಸೌಲಭ್ಯದ ಜತೆಗೆ ಟಿಕೆಟ್ ದರ ಏರಿಕೆ ಎಂಬ ಆತಂಕವೂ ಎದುರಾಗುತ್ತಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಿದ್ದನ್ನು ಪ್ರಯಾಣಿಕರು ಇನ್ನೂ ಮರೆತಿಲ್ಲ. ಈಗ ಮತ್ತೆ ಈ ವರ್ಷ ಫೆಬ್ರವರಿಯಿಂದ ಟಿಕೆಟ್ ಬೆಲೆಯಲ್ಲಿ ಶೇ.5ರಷ್ಟು ಏರಿಕೆ ಮಾಡುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿರ್ಧಾರ ಜಾರಿಯಾದರೆ, ಈಗಾಗಲೇ ದುಬಾರಿಯಾದ ಪ್ರಯಾಣ ಮತ್ತಷ್ಟು ಖರ್ಚಾಗಲಿದೆ.
ಹಿಂದಿನ ಬಾರಿ ದರ ಹೆಚ್ಚಳವಾದಾಗ ಕೆಲ ಮಾರ್ಗಗಳಲ್ಲಿ ಶೇ.70ಕ್ಕೂ ಹೆಚ್ಚು ಬೆಲೆ ಏರಿಕೆಯಾಗಿ ಪ್ರಯಾಣಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಏಕಾಏಕಿ ಬಂದ ಆ ಹೊರೆ ಜನರಲ್ಲಿ ಅಸಮಾಧಾನ ಮೂಡಿಸಿತ್ತು. ಇದೀಗ ಮತ್ತೆ ದರ ಏರಿಕೆಯ ಮಾತು ಕೇಳಿಬರುತ್ತಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
ಶುಲ್ಕ ನಿಗದಿ ಸಮಿತಿಯ ಶಿಫಾರಸು ಹಿನ್ನೆಲೆ: ಶುಲ್ಕ ನಿಗದಿ ಸಮಿತಿಯು ಪ್ರತಿವರ್ಷ ಮೆಟ್ರೋ ಟಿಕೆಟ್ ದರವನ್ನು ಪರಿಷ್ಕರಿಸಬೇಕು ಎಂದು ಶಿಫಾರಸು ಮಾಡಿದೆ. ಈ ಶಿಫಾರಸಿನಂತೆ ವಾರ್ಷಿಕ ಗರಿಷ್ಠ ಶೇ.5ರಷ್ಟಿಗೆ ಮಾತ್ರ ದರ ಏರಿಕೆಯನ್ನು ಮಿತಿಗೊಳಿಸಲಾಗಿದೆ. ಈ ಮಾರ್ಗಸೂಚಿಯ ಆಧಾರದ ಮೇಲೆ ಬಿಎಂಆರ್‌ಸಿಎಲ್ ಫೆಬ್ರವರಿಯಿಂದ ಟಿಕೆಟ್ ದರ ಪರಿಷ್ಕರಣೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಪ್ರಯಾಣಿಕರಿಗೆ ಅನನುಕೂಲದ ಭೀತಿ: ಬೆಂಗಳೂರು ನಗರದ ಬಹುಪಾಲು ಜನರಿಗೆ ಸ್ವಂತ ವಾಹನಗಳಿದ್ದರೂ, ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋವೇ ಮೊದಲ ಆಯ್ಕೆಯಾಗುತ್ತಿದೆ. ಆದರೆ ಪದೇಪದೆ ಟಿಕೆಟ್ ದರ ಹೆಚ್ಚಳವಾದರೆ, ಮೆಟ್ರೋ ಪ್ರಯಾಣಕ್ಕಿಂತ ರಸ್ತೆ ಸಂಚಾರವೇ ಒಳ್ಳೆಯದು ಎಂಬ ಮನಸ್ಥಿತಿ ಜನರಲ್ಲಿ ಮೂಡಬಹುದು. ಇದು ಮುಂದಿನ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಗೆ ಹೊಡೆತ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ನಮ್ಮ ಮೆಟ್ರೋದಲ್ಲಿ ಕನಿಷ್ಠ ಟಿಕೆಟ್ ದರ 10 ರೂಪಾಯಿಯಿಂದ ಆರಂಭವಾಗಿ, ಗರಿಷ್ಠ 90 ರೂಪಾಯಿವರೆಗೆ ಇದೆ. ಒಂದೆಡೆ ಮೆಟ್ರೋ ಮಾರ್ಗ ವಿಸ್ತರಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು, ಮತ್ತೊಂದೆಡೆ ಟಿಕೆಟ್ ದರ ಹೆಚ್ಚಿಸಿ ಹೊರೆ ಹಾಕುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನು ಪ್ರಯಾಣಿಕರು ಈಗಾಗಲೇ ಎತ್ತಿದ್ದಾರೆ. ಟಿಕೆಟ್ ದರವನ್ನು ನಿಯಂತ್ರಣದಲ್ಲಿ ಇಟ್ಟರೆ ಹೆಚ್ಚು ಜನರು ಮೆಟ್ರೋ ಬಳಸಲಿದ್ದು, ಅದರಿಂದಲೇ ಬಿಎಂಆರ್‌ಸಿಎಲ್‌ಗೆ ದೀರ್ಘಕಾಲದಲ್ಲಿ ಲಾಭವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.


