ಕಲಬುರಗಿ: ನಿಂತಿದ್ದ ಲಾರಿಗೆ ಮಿನಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ನೆಲೋಗಿ ಕ್ರಾಸ್ ಬಳಿ ಶನಿವಾರ ಮುಂಜಾನೆ ನಿಲ್ಲಿಸಿದ್ದ ಟ್ರಕ್‌ಗೆ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ 13 ವರ್ಷದ ಬಾಲಕಿ ಸೇರಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ಮೃತರು ಕಲಬುರಗಿ ಜಿಲ್ಲೆಯ ದರ್ಗಾವೊಂದಕ್ಕೆ ತೆರಳಿದ್ದಾಗ ಬೆಳಗಿನ ಜಾವ 3.30 ರಲ್ಲಿ ಅಪಘಾತ ಸಂಭವಿಸಿದೆ.
ಟೈರ್ ಪಂಕ್ಚರ್ ಆದ ಕಾರಣ ಟ್ರಕ್ ರಸ್ತೆಯ ಎಡಭಾಗದಲ್ಲಿ ನಿಂತಿತ್ತು. ಬಾಲಕ ಟೈರ್ ಬದಲಾಯಿಸುತ್ತಾ ಇದ್ದರು ಎನ್ನಲಾಗಿದೆ. ಈ ವೇಳೆ ಹಿಂದಿನಿAದ ಬಂದ ಬಸ್ ಟ್ರಕ್‌ಗೆ ಗುದ್ದಿದೆ. ಈ ವೇಳೆ ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಎ.ಶ್ರೀನಿವಾಸುಲು ದೃಢಪಡಿಸಿದ್ದಾರೆ.
ಮಿನಿ ಬಸ್ ಚಾಲಕ ಅಪಘಾತದ ನಂತರ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪತ್ತೆಗೆ ಮುಂದಾಗಿದ್ದಾರೆ.