ರಾಜಕೀಯ ಸುದ್ದಿ

ವಿ.ಸೋಮಣ್ಣಗೆ ಸಚಿವ ಸ್ಥಾನ ಸಾಧ್ಯತೆ: ದೆಹಲಿಯಿಂದ ಬುಲಾವ್?

Share It

ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು, ದೆಹಲಿಯಿಂದ ಅನಿರೀಕ್ಷಿತ ಕರೆ ಬಂದಿದ್ದು ಅವರು ದೆಹಲಿ ಪ್ರಯಾಣ ಬೆಳೆಸಿದ್ದಾರೆ.

ಕೇಂದ್ರ ಮಂತ್ರಿಗಳಾಗಿ ಯಾರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬ ಬಗ್ಗೆ ಈವರೆಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸಂಭಾವ್ಯ ಸಚಿವ ಸ್ಥಾನದ ಅಭ್ಯರ್ಥಿಗಳಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕರೆಯಲಾಗುತ್ತಿದೆ. ಇದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ವಿ.ಸೋಮಣ್ಣ ಅವರಿಗೂ ಕರೆ ಬಂದಿರುವುದು ಅಚ್ಚರಿ ಮೂಡಿಸಿದೆ.

ವಿ.ಸೋಮಣ್ಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಎರಡೂ ಕ್ಷೇತ್ರದಲ್ಲೂ ಸೋಲು ಕಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಭಾರಿ ವಿರೋಧದ ನಡುವೆಯೂ ಟಿಕೆಟ್ ನೀಡಲಾಗಿತ್ತು. ಆದರೆ, ಭರ್ಜರಿಯಾಗಿ ಗೆಲುವು ದಾಖಲಿಸಿರುವ ಸೋಮಣ್ಣ ಅವರಿಗೆ ಮೋದಿ ಕ್ಯಾಬಿನೆಟ್‌ನ ಸಚಿವರಾಗುವ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸೋಮಣ್ಣ ದೆಹಲಿ ಕಡೆಗೆ ಪ್ರಯಾಣ ಬೆಳಸಿದ್ದಾರೆ.

ರಾಜ್ಯದಿಂದ ಈಗಾಗಲೇ, ಪ್ರಹ್ಲಾದ್ ಜೋಷಿ, ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ. ಕುಮಾರಸ್ವಾಮಿ ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಜಗದೀಶ್ ಶೆಟ್ಟರ್ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಜತೆಗೆ, ಡಾ. ಮಂಜುನಾಥ್‌ಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಮಾತುಗಳು ಚುನಾವಣೆಗೆ ಮೊದಲೇ ಕೇಳಿಬಂದಿತ್ತು. ಇದೀಗ ವಿ.ಸೋಮಣ್ಣ ಅವರಿಗೆ ಕರೆಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ರಾಜ್ಯಕ್ಕೆ ೬ ಸ್ಥಾನ ಸಿಗಬಹುದು ಎಂದಿರುವುದು ಈ ಮೇಲಿನ ಎಲ್ಲ ಸಾಧ್ಯತೆಗಳನ್ನು ತೆರೆದಿಡುವಂತೆ ಮಾಡಿದೆ.


Share It

You cannot copy content of this page