ಶಾಸಕ ಹರೀಶ್ ಪೂಂಜಾ ಪುಂಡಾಟಕ್ಕೆ ಹೈಕೋರ್ಟ್ ಗರಂ
ಬೆಂಗಳೂರು: ಶಾಸಕರ ಜಾಗ ವಿಧಾನಸೌಧ, ಅಲ್ಲಿ ಕುಳಿತು ಶಾಸನ ರೂಪಿಸಬೇಕೋ ಹೊರತು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡುವುದಲ್ಲ ಎಂದು ಪೊಲೀಸ್ ಠಾಣೆಗೆ ನುಗ್ಗಿ ಪುಂಡಾಟ ಮೆರೆದಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡೆಯನ್ನು ಹೈಕೋರ್ಟ್ ಖಂಡಿಸಿದೆ.
ಪೊಲೀಸರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದ್ದು, ಎಫ್‌ಐಆರ್ ರದ್ದು ಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಶಾಸಕರು, “ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಾಧೀಶ ಕೃಷ್ಣ ಎಸ್.ದೀಕ್ಷೀತ್, ಜನಪ್ರತಿನಿಧಿ ಎಂದ ಮಾತ್ರಕ್ಕೆ ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನೆ ಮಾಡುವುದು ಎಷ್ಟು ಸರಿ? ಶಾಸಕರು ವಿಧಾನಸೌಧದಲ್ಲಿ ಕುಳಿತು ಶಾಸನ ರೂಪಿಸುವ ಕೆಲಸ ಮಾಡಬೇಕು, ಅದನ್ನು ಬಿಟ್ಟು ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಪೂಂಜಾ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಮೂರ್ತಿ, ಪೊಲೀಸರು ಭಯೋತ್ಪಾದಕನನ್ನು ಬಂಧಿಸಿದಾಗ ಆತನ ಪತ್ನಿ ಬಂದು, ನನ್ನ ಪತಿ ಬಾಳಾ ಒಳ್ಳೆಯವನು, ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರೆ, ಜನಪ್ರತಿನಿಧಿ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವೇ?, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸುವುದು, ಕಲ್ಲು ಎಸೆಯುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ತೊಂದರೆ ಆಗಬಹುದು. ಹಾಗಂತ ಜನಪ್ರತಿನಿಧಿಗಳು ಕೋರ್ಟ್ ಮಾಡುವ ಕೆಲಸವನ್ನು ತಾವು ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.
ಇಂತಹ ಪ್ರಕರಣದಲ್ಲಿ ದೇಶದ ಯಾವುದಾದರೂ, ಕೋರ್ಟ್, ವಿದೇಶದ ಯಾವುದೇ ನ್ಯಾಯಾಲಯ ಆತನ ಪರ ತೀರ್ಪು ನೀಡಿದ್ದರೆ, ಅದನ್ನು ನಮ್ಮ ಗಮನಕ್ಕೆ ತನ್ನಿ, ಎಂದು ತಾಕೀತು ಮಾಡುವ ಮೂಲಕ ಹರೀಶ್ ಪೂಂಜಾ ವಿರುದ್ಧದ ಪ್ರಕರಣಗಳನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದೆ. ವಕೀಲರಿಗೆ ತಾಕೀತು ಮಾಡಿ, ನಂತರ ವಿಚಾರಣೆಯನ್ನು ಮುಂದೂಡಿದೆ.