ಮುಂಬೈ: ಅಹ್ಮದ್‌ನಗರ ಮತ್ತು ಬೀಡ್ ಲೋಕಸಭಾ ಸ್ಥಾನಗಳನ್ನು ಎನ್‌ಸಿಪಿ(ಎಸ್‌ಸಿಪಿ) ಅಭ್ಯರ್ಥಿಗಳಾದ ನೀಲೇಶ್ ಲಂಕೆ ಮತ್ತು ಬಜರಂಗ್ ಸೋನಾವಾನೆ ಗೆದ್ದ ಬೆನ್ನಲ್ಲೇ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಕೈಜೋಡಿಸಲು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೆಲವು ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವೇಳೆ ನೀಲೇಶ್ ಲಂಕೆ ಮತ್ತು ಬಜರಂಗ್ ಸೋನಾವಾನೆ ಅವರು ಅಜಿತ್ ಪವಾರ್ ಬಣ ತೊರೆದು ಶರದ್ ಪವಾರ್ ಅವರ ಪಾಲಯಕ್ಕೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಕರ್ಜತ್-ಜಮಖೇಡ್ ಶಾಸಕ, ಶರದ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್ ಈ ಕುರಿತು ಹೇಳಿಕೆ ಯೊಂದನ್ನು ನೀಡಿದ್ದು, ಸುಮಾರು 18 ರಿಂದ 19 ಶಾಸಕರು ಅಜಿತ್ ಪವಾರ್ ಪಕ್ಷಕ್ಕೆ ಮರಳಲು ಆಸಕ್ತಿ ಹೊಂದಿದ್ದಾರೆ. ಆದರೆ, ಕಷ್ಟದ ಸಮಯದಲ್ಲಿ ಶರದ್ ಪವಾರ್ ಅವರೊಂದಿಗೆ ಉಳಿದವರು ಅವರಿಗೆ ಮುಖ್ಯ ಎಂದು ಹೇಳಿದ್ದಾರೆ.
ಎನ್‌ಸಿಪಿ(ಎಸ್‌ಸಿಪಿ) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಈ ಕುರಿತು ಪ್ರತಿಕ್ರಿಯಿಸಿದ್ದು, ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರವನ್ನು ಶರದ್ ಪವಾರ್ ಅವರು ತೆಗೆದುಕೊಳ್ಳಲಿದ್ದಾರೆ. ಲೋಕಸಭೆ ಫಲಿತಾಂಶಗಳು ಹೊರಬಂದ ಬೆನ್ನಲ್ಲಿ ಕೆಲವು ಶಾಸಕರು ತಮ್ಮ ನಿರ್ಧಾರಗಳನ್ನು ಬದಲಿಸಿದ್ದಾರೆ. ಆದರೆ ನಾವು ಇನ್ನೂ ಶಾಸಕರ ವಾಪಸಾತಿ ಬಗ್ಗೆ ಚಿಂತನೆ ನಡೆಸಿಲ್ಲ. ಶರದ್ ಪವಾರ್ ಅವರೊಂದಿಗೆ ಸಮಾಲೋಚಿಸಿದ ನಂತರ ಪಕ್ಷವು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
