ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಅನುದಾನ ಖರ್ಚಾಗದಿರಲು ಶಾಸಕರು ಕಾರಣ ಎಂಬ ಆರೋಪ ಕೇಳಿಬಂದಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಬಜೆಟ್‌ನಲ್ಲಿ ಮೀಸಲಿಟ್ಟಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಅನೇಕ ನಿಗಮಗಳ ಹಣ ಖರ್ಚಾಗಿಲ್ಲ. ಇದಕ್ಕೆ ಶಾಸಕರು ಸೂಕ್ತ ಸಂದರ್ಭದಲ್ಲಿ ಫಲಾನುಭವಿಗಳ ಪಟ್ಟಿ ಕೊಡದಿರುವುದು ಕಾರಣ ಎನ್ನಲಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಶಾಸಕರು ಸೇರಿ ಅನೇಕ ಶಾಸಕರು ಸೂಕ್ತ ಸಂದರ್ಭದಲ್ಲಿ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ನೀಡುವುದಿಲ್ಲ. ಹೀಗಾಗಿ, ಅನುದಾನದ ಸಮರ್ಪಕ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅವಲತ್ತುಕೊಂಡರು ಎನ್ನಲಾಗಿದೆ.
2023-24 ನೇ ಸಾಲಿನಲ್ಲಿ ಹಿಂದಿನ ವರ್ಷ 35221.84 ಕೋಟಿ ರು ಅನುದಾನ ನಿಗದಿಯಾಗಿತ್ತು. ಇದರಲ್ಲಿ ಶೇ 99.64 ರಷ್ಟು ಖರ್ಚಾಗಿದೆ. 2024-25ನೇ ಸಾಲಿನಲ್ಲಿ 39121.46 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿಗಿಂತ ಶೇ.11 ರಷ್ಟು ಹೆಚ್ಚು ಅನುದಾನ ಸಮುದಾಯಗಳ ಅಭಿವೃದ್ಧಿಗೆ ನಿಗದಿಯಾಗಿದೆ.
ಪ್ರಸ್ತುತ ಶೇ. ೬೫ ರಷ್ಟು ಅನುದಾನ ಮಾತ್ರವೇ ಬಳಕೆಯಾಗಿದ್ದು, ಉಳಿದ ಅನುದಾನದ ಬಳಕೆಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ನಿಗಮದ ಅಧ್ಯಕ್ಷರು ಮತ್ತು ಸಂಬಂಧಿಸಿದ ಸಚಿವರು, ಶಾಸಕರಿಗೆ ಶೀಘ್ರವೇ ಪಟ್ಟಿ ನೀಡುವಂತೆ ಮನವಿ ಮಾಡಿಕೊಳ್ಳಬೇಕು. ಆ ಮೂಲಕ ಶೇ. 100 ರಷ್ಟು ಗುರಿ ಸಾಧಿಸಬೇಕು ಎಂದು ಸೂಚನೆ ನೀಡಿದ್ದಾರೆ.
2023-24 ರ ಅನುದಾನ : 35221.84 ಕೋಟಿ
2024-25 ರ ಅನುದಾನ : 39121.46 ಕೋಟಿ
ಕಳೆದ ವರ್ಷಕ್ಕಿಂತ ಹೆಚ್ಚು : 3897 ಕೋಟಿ
ಎಸ್‌ಸಿಎಸ್‌ಪಿ: 27,673.96 ಕೋಟಿ
ಟಿ.ಎಸ್.ಪಿ. : 11447.50 ಕೋಟಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಲ್ಲಿ ಹಣ ವೆಚ್ಚವಾಗಿಲ್ಲ. ಇದಕ್ಕೆ ಶಾಸಕರು ಪಟ್ಟಿ ಕೊಡಲಿಲ್ಲ ಎಂಬ ಕಾರಣ ನೀಡುತ್ತಾರೆ. ನಿಗಮಗಳ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಮನವೊಲಿಸಬೇಕು. ಯಾರು ನಿರ್ಲಕ್ಷ್ಯ ಮಾಡಿದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ

