ಬೆಂಗಳೂರು: ಕೇರಳ ಕರಾವಳಿ ಮತ್ತು ಮಲೆನಾಡು ಪ್ರದೇಶವನ್ನು ಈಗಾಗಲೇ ಪ್ರವೇಶಿಸಿರುವ ಮುಂಗಾರು ಮಾರುತಗಳು ಜೂನ್ 6 ರಂದು ರಾಜ್ಯವನ್ನು ಪ್ರವೇಶಲಿವೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ.
ಮುಂಗಾರು ಮಾರುತಗಳಿಂದಾಗಿ ಈಗಾಗಲೇ ಕೇರಳದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಪರಿಣಾಮ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಏಳು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಸ್ಥಳಗಳಲ್ಲಿ ಗುಡುಗು ಸಹಿತ ಪೂರ್ವ ಮುಂಗಾರು ಮಳೆಯಾಗಲಿದೆ. ಹಾಸನ, ಕೊಡಗು, ಮೈಸೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗಲಿದೆ. ಮೇಲ್ಮೈ ಮಾರುತಗಳ ಪರಿಣಾಮ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಗಾಳಿ ಬೀಸಲಿದೆ.
ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಂತರ ರಾಜ್ಯಾದ್ಯಂತ 2 ರಿಂದ 3 ಡಿಗ್ರಿ ತಾಪಮಾನ ಕುಸಿಯಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಮೇಲ್ಮೈ ಗಾಳಿ ಪ್ರಬಲವಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 32 ಡಿಗ್ರಿ ಮತ್ತು 22 ಡಿಗ್ರಿ ಇರಲಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿಗೆ ಉತ್ತಮ ಮುಂಗಾರು ಪೂರ್ವ ಮಳೆ: ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಮಳೆ 181 ಎಂಎಂ ದಾಖಲಾಗಿದೆ. ಹೆಚ್‌ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ 157 ಎಂಎಂ ಮತ್ತು ಜಿಕೆವಿಕೆ ಸುತ್ತಲೂ 192 ಎಂಎಂ ಮಳೆ ಸುರಿದಿದೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಪೂರ್ವ ಮುಂಗಾರು ಮಳೆ ಆಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಿದದು, ಅತಿ ಹೆಚ್ಚು ಮಂಗಳೂರಿನ ಪಣಂಬೂರಿನಲ್ಲಿ 366 ಎಂಎಂ, ಚಿಕ್ಕಮಗಳೂರಿನಲ್ಲಿ 363 ಎಂಎಂ ಮಳೆ ಸುರಿದಿದೆ. ನಂತರದ ಸ್ಥಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಪ್ರದೇಶ 282 ಎಂಎಂ ಮತ್ತು ಆಗುಂಬೆ 279 ಎಂಎಂ ದಾಖಲಿಸಿವೆ.
