ಬಿಹಾರಾದ ರಣಬಿಸಿಲಿನ ಝಳಕ್ಕೆ 80 ಕ್ಕೂ ಹೆಚ್ಚು ಜನರ ಬಲಿ
ಪಾಟ್ನಾ : ಒಂದೆಡೆ, ಮಳೆ ಪ್ರವಾಹದಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ರಣಬಿಸಿಲಿನ ಝಳ ಇನ್ನೂ ಕಾಡುತ್ತಿದೆ. ಬಿಹಾರದಲ್ಲಿ ಬಿಸಿಲಿನ ಝಳದಿಂದ ಕಳೆದ ಮೂರು ದಿನಗಳಲ್ಲಿ 80 ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಪಮಾನ ಮತ್ತು ಬಿಸಿಗಾಳಿಯ ತೀವ್ರತೆ ಬಿಹಾರವನ್ನು ಇನ್ನಿಲ್ಲದಂತೆ ಕಾಡುತ್ತಿದ್ದೆ. ಔರಂಗಾಬಾದ್‌ನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದ್ದು 48.2 ಡಿಗ್ರಿಗೆ ಏರಿಕೆ ಕಂಡಿದೆ. ಇಲ್ಲಿ 19 ಜನರು ಪ್ರಾಣ ಕಳೆದುಕೊಂಡಿದ್ದು, ಹೊಡೆತದಿಂದಾಗಿಯೇ ಸುಮಾರು 200 ಜನ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಬಿಸಿಲಿನ ತಾಪದಿಂದ ಬಳಲಿದ 300 ಕ್ಕೂ ಹೆಚ್ಚು ಜನ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅರ್ವಾಲ್, ಬಕ್ಸಾರ್, ರೋಹ್ಟಾಸ್ ಮತ್ತು ಬೇಗುಸರಾಯ್ ಜಿಲ್ಲೆಗಳಲ್ಲಿ ಬಿಸಿಗಾಳಿಯಿಂದ ಎಂಟು ಜನ ಸಾವನ್ನಪ್ಪಿದ್ದಾರೆ. ಪಾಟ್ನಾ-ಗಯಾ ರೈಲ್ವೆ ವಿಭಾಗದ ನಾದೌಲ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಶಾಖದ ಹೊಡೆತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮೃತ ದೇಹಗಳನ್ನು ಗುರುತಿಸಲಾಗಿಲ್ಲ. ಪಾಟ್ನಾ ಪಿಎಂಸಿಎಚ್‌ನಲ್ಲಿ ಸೆಕ್ಟರ್ ಅಧಿಕಾರಿಯೊಬ್ಬರು ಚಿಕಿತ್ಸೆ ಸಮಯದಲ್ಲಿ ನಿಧನರಾಗಿದ್ದಾರೆ. ಮೃತ ಅಧಿಕಾರಿ ದುಖರನ್ ಪ್ರಸಾದ್ ಎಂದು ಗುರುತಿಸಲಾಗಿದ್ದು, ಇವರು ಪಾಟ್ನಾ ಹೊರವಲಯದ ಧನರುವಾದ ಕೃಷಿ ಸಂಯೋಜಕರಾಗಿದ್ದು, ಮೂರ್ಛೆ ಹೋದ ಅವರನ್ನು ಶುಕ್ರವಾರ ಪಿಎಂಸಿಎಚ್‌ಗೆ ದಾಖಲಿಸಲಾಗಿತ್ತು.
ಇನ್ನು ಬಿಸಿಗಾಳಿಯ ಪರಿಣಾಮ ಚುನಾವಣೆಯನ್ನು ಬಿಟ್ಟಿಲ್ಲ. ಭೋಜಪುರ ಜಿಲ್ಲೆಯ ಅರ್ರಾ ನಗರದಲ್ಲಿ ಬಿಸಿಗಾಳಿಯಿಂದ ಐದು ಮತಗಟ್ಟೆ ಸಿಬ್ಬಂದಿ ಸೇರಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ. ಇದಲ್ಲದೇ, ಸಿಪಿಐ-ಎಂಎಲ್‌ನ ರಾಜ್ಯ ಸಮಿತಿ ಸದಸ್ಯರೊಬ್ಬರ ಜೀವವನ್ನೂ ಬಲಿ ಪಡೆದಿದೆ. ರೋಹ್ಟಾಸ್‌ನಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ. ಜೆಹಾನಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸೈನಿಕ ಸೇರಿ ಎಂಟು ಜನರು ಸಾವನ್ನಪ್ಪಿದ್ದಾರೆ. ಕೈಮೂರ್ ಜಿಲ್ಲೆಯಲ್ಲಿ ಶಿಕ್ಷಕಿ ಸೇರಿ ಆರು ಜನರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.