ಆರೋಗ್ಯ ಸುದ್ದಿ

ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

Share It

ಬೆಂಗಳೂರಿನಲ್ಲಿ ಬೃಹತ್ತಾದ, ಸಾರ್ವಜನಿಕ ಉದ್ದೇಶವುಳ್ಳ, ಲೋಕೋಪಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಲು ಕರ್ನಾಟಕ ಸರ್ಕಾರ (ಸರ್ಕಾರ) ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್‌ (ಫೌಂಡೇಷನ್) ಪಾಲುದಾರಿಕೆಗೆ ಕೈ ಜೋಡಿಸಿವೆ.

ಈ ಆಸ್ಪತ್ರೆಯನ್ನು 1000 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು ಈ ಮೂಲಕ ದುರ್ಬಲ ವರ್ಗಗಳು ಮತ್ತು ಸೂಕ್ತ ಸೇವೆಗಳಿಂದ ವಂಚಿತರಾದ ಜನರಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಒಟ್ಟಾರೆ ಶೇಕಡಾ 75 ರಷ್ಟು ಹಾಸಿಗೆಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವ ಗುರಿ ಹೊಂದಲಾಗಿದ್ದು, ಉಳಿದ ಹಾಸಿಗೆಗಳಿಗೆ ತೃತೀಯ ಹಂತದ ಆರೈಕೆ ಒದಗಿಸುವ ಸರ್ಕಾರಿ ಆಸ್ಪತ್ರೆಗಳ ದರಕ್ಕೆ ಸರಿಸಮಾನವಾದ ದರವನ್ನು ವಿಧಿಸಲಾಗುತ್ತದೆ.

ಈ ಆಸ್ಪತ್ರೆಯು ವಿವಿಧ ಸ್ಪೆಷಾಲಿಟಿಗಳನ್ನು ಒದಗಿಸಲಿದ್ದು, ಅಂಗಾಂಗ ಕಸಿಗೆ ವಿಶೇಷ ಒತ್ತನ್ನು ನೀಡಲಾಗುತ್ತದೆ. ಅಲ್ಲದೆ ಇದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ತನ್ನ ಕೊಡುಗೆಯನ್ನು ನೀಡಲಿದೆ. ಈ ಉಪಕ್ರಮವು, ಅತ್ಯಾಧುನಿಕ ತೃತೀಯ ಹಂತದ ಆರೈಕೆಯ ಲಭ್ಯತೆಯನ್ನು ವಿಸ್ತರಿಸುವ ಮೂಲಕ ನಗರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅದಕ್ಕೆ ಪೂರಕವಾಗಿ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿದೆ.

ಆಸ್ಪತ್ರೆಯ ಸಂಪೂರ್ಣ ಬಂಡವಾಳ ಮತ್ತು ಕಾರ್ಯನಿರ್ವಹಣಾ ವೆಚ್ಚವನ್ನು ಫೌಂಡೇಷನ್‌ ಭರಿಸಲಿದೆ. ಇದನ್ನು ಸರ್ಕಾರಿ ಮಾಲೀಕತ್ವದ ಜಮೀನಿನಲ್ಲಿ ಸ್ಥಾಪಿಸಲಾಗುತ್ತದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸ್ಥಾಪಿಸುವ ಪ್ರತ್ಯೇಕ ಲಾಭೇತರ ಸಂಸ್ಥೆಯ ಮೂಲಕ ಈ ಆಸ್ಪತ್ರೆಯನ್ನು ನಿರ್ಮಿಸಿ ನಿರ್ವಹಿಸಲಾಗುತ್ತದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಸರ್ಕಾರಿ ಪ್ರತಿನಿಧಿಗಳನ್ನು ಹೊಂದಿರಲಿದೆ.

ಜಮೀನನ್ನು ಗುತ್ತಿಗೆ ಪಡೆದು ಅಗತ್ಯ ಅನುಮೋದನೆಗಳನ್ನು ಗಳಿಸಿದ ನಂತರ ಐದು ವರ್ಷಗಳೊಳಗೆ ಆಸ್ಪತ್ರೆಯು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ. ಆಸ್ಪತ್ರೆಯ ಎಲ್ಲ ಚಟುವಟಿಕೆಗಳು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶಕ್ಕೆ ತಕ್ಕುದಾಗಿ ಇರಲಿವೆ.


Share It

You cannot copy content of this page