ಅಪರಾಧ ಸುದ್ದಿ

ಶತಾಯುಷಿ ಅಜ್ಜಿಯ ಮೇಲೆ ದಾಳಿ: ಕೊಲೆ ಬಳಿಕ ಶವವನ್ನು ಪೆಟ್ಟಿಗೆಯಲ್ಲಿ ಮರೆಮಾಚಿ ಪರಾರಿ

Share It

ಶತಾಯುಷಿ ಅಜ್ಜಿಯ ಮೇಲೆ ದಾಳಿ: ಕೊಲೆ ಬಳಿಕ ಶವವನ್ನು ಪೆಟ್ಟಿಗೆಯಲ್ಲಿ ಮರೆಮಾಚಿ ಪರಾರಿ

ಪಂಜಾಬ್ ರಾಜ್ಯದ ಹೋಶಿಯಾರ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮನಕಲಕುವ ಘಟನೆ ನಡೆದಿದೆ. 99 ವರ್ಷದ ವೃದ್ಧೆ ಜೋಗಿಂದರ್ ಕೌರ್ ಅವರನ್ನು ದುಷ್ಕರ್ಮಿಯೊಬ್ಬರು ಹತ್ಯೆ ಮಾಡಿ, ಅವರ ಶವವನ್ನು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಚಬ್ಬೇವಾಲ್ ಭಾಗದ ಭಾಮ್ ಗ್ರಾಮದಲ್ಲಿ ವಾಸಿಸುತ್ತಿದ್ದ ಜೋಗಿಂದರ್ ಕೌರ್ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರು. ಶತಮಾನೋತ್ಸವವನ್ನು ಇನ್ನೂ ಕೆಲವು ತಿಂಗಳುಗಳಲ್ಲಿ ಆಚರಿಸಬೇಕಿದ್ದ ಅವರು ದುಷ್ಕೃತ್ಯದ ಬಲಿಯಾಗಿದ್ದಾರೆ. ಬುಧವಾರ ಸಂಜೆ ಅವರ ಮನೆಗೆ ಹಾಲು ತಲುಪಿಸುವ ವ್ಯಕ್ತಿ ಹಿಂದಿನ ದಿನ ಇಟ್ಟಿದ್ದ ಹಾಲಿನ ಬಾಟಲ್ ಅದೆ ಹಾಗೆ ಬಾಗಿಲಿನ ಮುಂದೆ ಉಳಿದಿರುವುದನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾನೆ. ಈ ವಿಚಾರವನ್ನು ನೆರೆಹೊರೆಯವರಿಗೆ ತಿಳಿಸಿದ ನಂತರ ಮನೆಯೊಳಗೆ ಪರಿಶೀಲನೆ ನಡೆಸಲಾಗಿದೆ.

ಮನೆಯೊಳಗಿನ ಕಬ್ಬಿಣದ ಟ್ರಂಕ್ ತೆರೆದಾಗ ಅದರೊಳಗೆ ವೃದ್ಧೆಯ ಶವ ಪತ್ತೆಯಾಗಿದೆ. ತಲೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಳ್ಳತನದ ಉದ್ದೇಶದಿಂದ ಮನೆಗೆ ನುಗ್ಗಿದ ವ್ಯಕ್ತಿ ದರೋಡೆ ಯತ್ನದ ವೇಳೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಘಟನೆಗೆ ಸಂಬಂಧಿಸಿ ಅದೇ ಗ್ರಾಮದ ನಿವಾಸಿ ಡೇನಿಯಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯು ಪರಾರಿಯಾಗಿದ್ದು, ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ ಸಂಬಂಧಿತ ಅಪರಾಧ) ಮತ್ತು 331(3) (ಮನೆಗೆ ನುಗ್ಗಿ ಅಪರಾಧ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಭೀತಿ ಮತ್ತು ಆಕ್ರೋಶ ಉಂಟುಮಾಡಿದ್ದು, ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.


Share It

You cannot copy content of this page