ಅಪರಾಧ ಸುದ್ದಿ

ಕುಟುಂಬದ ಮೂವರನ್ನು ಕೊಂದಿದ್ದ ಕೊಲೆಪಾತಕಿ: ಇದು ಕೊಲೆಯಲ್ಲ, ಮರ್ಯಾದಾ ಹತ್ಯೆ !

Share It

ಬೆಂಗಳೂರು: ತಿಲಕ್ ನಗರದಲ್ಲಿ ನಾಪತ್ತೆ ದೂರು ಕೊಡಲು ಬಂದು ತನ್ನಿಡೀ ಕುಟುಂಬವನ್ನು ಕೊಂದು ಮನೆಯ ಹಾಲ್‌ನಲ್ಲಿಯೇ ಹೂತುಹಾಕಿದ್ದ ಪ್ರಕರಣಕ್ಕೆ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ.

ಕೊಲೆಗಾರ ಅಕ್ಷಯ್ ತನ್ನ ತಂಗಿ ಮತ್ತು ತಂದೆ, ತಾಯಿ ಕಾಣೆಯಾಗಿದ್ದಾರೆ ಎಂದು ದೂರು ನೀಡಲು ಬಂದಿದ್ದ. ಪೊಲೀಸರು ವಿಚಾರಣೆ ನಡೆಸುವ ವೇಳೆ ಆತನ ಮೇಲೆಯೇ ಅನುಮಾನ ಬಂದು ವಿಚಾರಣೆ ನಡೆಸಿದಾಗ, ಆತನೇ ಮೂವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಅಕ್ಷಯ್ ತಂಗಿ ಅಮೃತಾ ಪಿಯುಸಿ ಓದುತ್ತಿದ್ದು, ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ. ಆಕೆ ಆತನೊಂದಿಗೆ ಮಾಡಿದ್ದ ಮೆಸೇಜ್ ಚಾಟ್ ಜಾಡು ಹಿಡಿದು, ಆತನೊಂದಿಗೆ ಮಾತನಾಡಿ ಅಕ್ಷಯ್ ಅವಾಜ್ ಹಾಕಿದ್ದ. ಇದರಿಂದ ಕೋಪಗೊಂಡ ಅಕ್ಷಯ್ ತನ್ನ ತಂಗಿಯ ಮೇಲೆ ಕೂಗಾಡಿದ್ದ.

ಜತೆಗೆ ಆಕೆ ಮೂರು ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದ್ದು, ಆಕೆ ಪ್ರೀತಿಸುತ್ತಿರುವ ಹುಡುಗ ಬೇರೆ ಜಾತಿಯವನು ಎಂಬುದು ಅಕ್ಷಯ್‌ಗೆ ಗೊತ್ತಾಗಿತ್ತು. ಈ ವಿಷಯದಲ್ಲಿ ತಂದೆ ಮತ್ತು ತಾಯಿ ಕೂಡ ಅಮೃತಾಗೆ ಬೆಂಬಲ ಸೂಚಿಸಿ, ಗರ್ಭಪಾತ ಮಾಡಿಸಿಸಲು ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದ ಕೋಪಗೊಂಡ ಅಕ್ಷಯ್ ಮೂವರನ್ನು ಕೊಂದಿದ್ದಾನೆ ಎನ್ನಲಾಗಿದೆ.

ತನ್ನ ಮಾವನ ಸಹಾಯದಿಂದ ಮೂವರನ್ನು ಕೊಂದು ಕೊಟ್ಟೂರಿನ ಮನೆಯ ಹಾಲ್‌ನಲ್ಲಿಯೇ ಶವಗಳನ್ನು ಹೊತಿಟ್ಟು, ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಇಲ್ಲಿ ತನ್ನ ತಂದೆ ತಾಯಿ ಮತ್ತು ತಂಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿ ಸಿಕ್ಕಿಬಿದ್ದಿದ್ದಾನೆ.

ಆತ ಮಾಡಿದ್ದು ನಾಲ್ಕು ಕೊಲೆಗಳಾ?
ಈ ನಡುವೆ ಆತ ತನ್ನ ತಂಗಿ ಪ್ರೀತಿಸುತ್ತಿದ್ದ ಹುಡುಗನನ್ನು ಕೊಲೆ ಮಾಡಿದ್ದಾನೆ ಎಂಭ ಅನುಮಾನ ಪೊಲೀಸರಿಗೆ ಮೂಡಿದೆ. ಈಗ ಕೊಟ್ಟೂರಿನ ಮನೆಯಲ್ಲಿ ತಂದೆ, ತಾಯಿ ಮತ್ತು ತಂಗಿಯ ಶವಗಳು ಸಿಕ್ಕಿದ್ದು, ಆಕೆಯ ಪ್ರಿಯಕರನ್ನು ಕೊಂದಿರುವ ಸುಳಿವು ನೀಡಿದ್ದಾನೆ. ಆದರೆ, ಆತನ ಹೇಳಿಕೆ ಅಸ್ಪಷ್ಟ ಮತ್ತು ಅನುಮಾನದಿಂದ ಕೂಡಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


Share It

You cannot copy content of this page