ಶಿವಮೊಗ್ಗ: ಮುಸಿಯಾ ಅಥವಾ ಹನುಮಾನ್ ಲಂಗೂರ್ ಜಾತಿಯ ಕೋತಿಗಳ ದಾಳಿಯಿಂದ ವ್ಯಕ್ತಿಯೊಬ್ಬ ತೀವ್ರವಾದ ರಕ್ತಗಾಯದಿಂದ ಆಸ್ಪತ್ರೆಗೆ ಸೇರಿರುವ ಘಟನೆಯ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂ ಸೂಡೂರು ಸಮೀಪ ಐದನೇ ಮೈಲಿಕಲ್ಲು ಬಳಿ ಈ ಘಟನೆ ನಡೆದಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಲೋಕೇಶ್ ಹೊಸಕೊಪ್ಪ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಐದನೇ ಮೈಲಿಕಲ್ಲು ಬಸ್ ನಿಲ್ದಾಣದ ಬಳಿಯಲ್ಲಿ ಲೋಕೇಶ್ ಅವರು ಕಬ್ಬಿನ ಜ್ಯೂಸ್ ಅಂಗಡಿಯನ್ನಿಟ್ಟು ಕೊಂಡಿದ್ದಾರೆ. ನಿನ್ನೆ ದಿನ ಭಾನುವಾರ ಬೆಳಿಗ್ಗೆ ಅಂಗಡಿ ತೆರೆಯಲು ಹೋದ ಸಂದರ್ಭದಲ್ಲಿ ಅವರ ಮೇಲೆ ಮುಸಿಯಾಗಳು ದಾಳಿ ನಡೆಸಿದೆ.
ಅನಿರೀಕ್ಷಿತ ದಾಳಿಯಲ್ಲಿ ಮುಸಿಯಾ ಲೋಕೇಶ್ರ ಕೈ ಮತ್ತು ಕಾಲುಗಳನ್ನು ಕಚ್ಚಿ ರಕ್ತ ಬರಿಸಿದೆ. ತಕ್ಷಣವೇ ಅಲ್ಲಿದ್ದವರು ಮುಸಿಯಾಗಳನ್ನ ಓಡಿಸಿ ಲೋಕೇಶ್ರನ್ನು ಸ್ಥಳೀಯ ಪ್ರಾಥಮಿಕ ಕೇಂದ್ರಕ್ಕೆ ರವಾನಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

