ನೇಹಾ ಹತ್ಯೆ ಖಂಡಿಸಿ ಹುಬ್ಬಳ್ಳಿ ಬಂದ್: ಮುಸ್ಲಿಂ ವ್ಯಾಪಾರಸ್ಥರಿಂದ ವ್ಯಾಪಕ ಬೆಂಬಲ
ಹುಬ್ಬಳ್ಳಿ, ಏಪ್ರಿಲ್ 22: ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಂದು( ಏಪ್ರಿಲ್ 22) ಧಾರವಾಡ ಬಂದ್‌ಗೆ ಕರೆ ನೀಡಿದ್ದಾರೆ. ನೇಹಾ ಹತ್ಯೆ ಖಂಡಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ ಮುಸ್ಲಿಂ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿದೆ. ಹುಬ್ಬಳ್ಳಿಯ ಶಾಹ ಬಜಾರ್ ಮತ್ತು ನೂರಾನಿ ಮಾರ್ಕೆಟ್ ವ್ಯಾಪಾರಸ್ಥರಿಂದ ಬಂದ್‌ಗೆ ಬೆಂಬಲ ನೀಡಲಾಯಿತು.
ಅಂಗಡಿ- ಮುಗ್ಗಟ್ಟುಗಳನ್ನ ಬಂದ್ ಮಾಡಿ ನೇಹಾ ಹತ್ಯೆಯನ್ನು ಖಂಡಿಸಿದ ವ್ಯಾಪಾರಸ್ಥರು, ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿಗಳು ಬಂದ್ ಆಗಿರಲಿದ್ದು, ಜಸ್ಟಿಸ್ ಟು ನೇಹಾ ಹಿರೇಮಠ ಎಂದು ತಮ್ಮ ಅಂಗಡಿಗಳಿಗೆ ಬೋರ್ಡ್‌ಗಳನ್ನು ಹಾಕಿ ಬಂದ್‌ಗೆ ಬೆಂಬಲ ನೀಡಿದ್ದಾರೆ. ಇನ್ನೂ ಹಂತಕ ಫಯಾಜ್‌ನಿಗೆ ಉಗ್ರವಾದ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ್ದು, ಮಾರುಕಟ್ಟೆಯ ಪ್ರದೇಶಗಳು ಬಿಕೋ ಎನ್ನುತ್ತಿದೆ.
ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯ ಬಗ್ಗೆ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿದ್ದು, ನೇಹಾ ಹಿರೇಮಠ ಕೊಲೆಯಾಗಿರುವುದು ದುರ್ದೈವದ ಸಂಗತಿ. ನಮ್ಮ ಮಹಾನಗರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಘಟನೆಯನ್ನು ಖಂಡಿಸುತ್ತೇವೆ. ಫಯಾಜ್ ಮಾಡಿರುವುದು ಹೀನ ಕೆಲಸ. ಅವಳು ನಿರಂಜನ ಮಗಳಲ್ಲ, ನಮ್ಮ ಮಗಳು. ಕೊಲೆ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ಆಗಬೇಕು. ಈಗಾಗಲೇ ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ. ಇದು ವಿಶೇಷ ಪ್ರಕರಣ ಎಂದು ತಿಳಿದು 90 ದಿನದಲ್ಲಿ ಪ್ರಕರಣ ಬಗೆಹರಿಸಬೇಕು. ಸಮಾಜ ಯಾವುದೇ ಇರಲಿ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಅಂಜುಮನ್ ಆವರಣದಿಂದ ಮೌನ ಮೆರವಣಿಗೆ ಮಾಡಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನ ಒಂದು ಕೊಠಡಿಗೆ ನೇಹಾ ಹೆಸರನ್ನು ಇಡುತ್ತೇವೆ. ಫಯಾಜ್ ಪರ ಯಾರೂ ಮುಸ್ಲಿಂ ವಕೀಲರು ವಕಾಲತ್ತು ವಹಿಸಬಾರದು. ನಾವು ವಕೀಲರಿಗೆ ಹೇಳಿದ್ದೇವೆ ಅವರು ಒಪ್ಪಿದ್ದಾರೆ. ಪ್ರಕರಣ ಮುಗಿಯವರೆಗೂ ನಮ್ಮ ಸಮಾಜ ಅವರ ಜೊತೆ ಇರತ್ತದೆ. ನಿರಂಜನ ಮತ್ತು ನಾವು ಬಹಳ ವರ್ಷದಿಂದ ಸಂಪರ್ಕದಲ್ಲಿ ಇದ್ದೇವೆ. ಯಾರು ನೋಡದಂತಹ ಶಿಕ್ಷೆಯನ್ನು ದೇವರು ಫಯಾಜ್‌ಗೆ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.