ಪ್ರವಾಸಿಗರ ರಕ್ಷಣೆಗೆ ನಿಂತು ಪ್ರಾಣ ತೆತ್ತ ಮುಸ್ಲಿಂ ಯುವಕ
ಶ್ರೀನಗರ : ಭಯೋತ್ಪಾದನೆಗೆ ಧರ್ಮವಿಲ್ಲ ಎಂಬ ಮಾತು ಆಗಾಗ ಕೇಳಿಬರುತ್ತಿದ್ದರೂ, ಕಾಶ್ಮೀರದ ಘಟನೆಯನ್ನು ಧರ್ಮಗಳ ನಡುವೆ ಬೆಂಕಿಹಚ್ಚಲು ಅನೇಕರು ಬಳಸುತ್ತಿದ್ದಾರೆ. ಆದರೆ, ಪ್ರವಾಸಿಗರ ರಕ್ಷಣೆಗೆ ನಿಂತು ಪ್ರಾಣ ಕಳೆದುಕೊಂಡ ಕುದುರೆ ರೈಡರ್ ಕೂಡ ಮುಸ್ಲಿಂ ಆಗಿದ್ದ ಎಂಬ ಕುತೂಹಲ ಹೊರಬಿದ್ದಿದೆ.
ಉಗ್ರರು ದಾಳಿ ನಡೆಸಿದಾಗ ಕೆಲ ಮಹಿಳೆಯರನ್ನು ಅಲ್ಲಿನ ಯುವಕರು ರಕ್ಷಣೆ ಮಾಡಿದರು. ಕರ್ನಾಟಕದ ಮೃತ ಮಂಜುನಾಥ್ ಪತ್ನಿಯನ್ನು ಅಲ್ಲಿನ ಮೂವರು ಮುಸ್ಲಿಂ ಯುವಕರು ಸುರಕ್ಷಿತ ಜಾಗಕ್ಕೆ ಕರೆತಂದರು ಎಂಬೆಲ್ಲ ವಿಚಾರಗಳ ನಡುವೆಯೂ ಧರ್ಮದ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಮುಸ್ಲಿಂ ಆದ್ರೆ ಬಿಡ್ತೀವಿ ಅಂದ್ರು, ಧರ್ಮ ಕೇಳಿ ಸಾಯಿಸಿದ್ರು ಎಂಬೆಲ್ಲ ಪೋಸ್ಟರ್‌ಗಳು ಜಾಲತಾಣದಲ್ಲಿ ಹರಿದಾಡ್ತಿವೆ.
ಈ ನಡುವೆ ತಾನು ಕರೆದೊಯ್ದಿದ್ದ ಪ್ರವಾಸಿಗರ ರಕ್ಷಿಸಿಕೊಳ್ಳುವ ಸಲುವಾಗಿ, ಮುಸ್ಲಿಂ ಯುವಕನೊಬ್ಬ ಉಗ್ರರ ಜತೆ ಕಾದಾಟಕ್ಕಿಳಿದಿದ್ದ. ಉಗ್ರನೊಬ್ಬ ಗುಂಡು ಹಾರಿಸಲು ಮುಂದಾದಾಗ ಆತನ ಬಂದೂಕಿಗೆ ಎದೆಕೊಟ್ಟು, ಅದನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿದ. ಆಗ ಉಗ್ರರು ಆತನನ್ನು ಕೊಂದು ಹಾಕಿದರು ಎಂಬುದು ಇದೀಗ ಬಯಲಾಗಿದೆ. ಉಗ್ರರಿಗೆ ಧರ್ಮದ ಹಂಗಿಲ್ಲ ಎಂಬುದು ಇದರಿಂದ ಸಾಭೀತಾದಂತಾಗಿದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಗಿರಿಧಾಮದ ಬೈಸರನ್‌ನಲ್ಲಿ ನಡೆದ ಈ ಉಗ್ರ ಕೃತ್ಯದ ಸಂದರ್ಭದಲ್ಲಿ ೨೮ ವರ್ಷದ ಮುಸ್ಲಿಂ ಪೋನಿ ರೈಡ್ ಆಪರೇಟರ್ ಸೈಯದ್ ಆದಿಲ್ ಹುಸೇನ್ ಷಾ ಮೃತಪಟ್ಟಿದ್ದಾನೆ. ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸುತ್ತಿದ್ದAತೆ ಆತ ಓಡಿಹೋಗುವ ಬದಲು ತಾನು ಕರೆತಂದಿದ್ದ ಕುಟುಂಬವನ್ನು ರಕ್ಷಿಸಲು ಮುಂದಾದ. ಹೀಗಾಗಿ, ಆತ ಪ್ರಾಣ ಕಳೆದುಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆತನ ಅಂತ್ಯಕ್ರಿಯೆ ಸಂದರ್ಭದಲ್ಲಿ ಆತನ ತಾಯಿ, ತಮ್ಮ ಸಾಧಾರಣ ಮನೆಯ ಬಾಗಿಲಲ್ಲಿ ಅಳುತ್ತಾ, ತಮ್ಮ ಮಗನನ್ನು ಕುಟುಂಬದ ಆಧಾರಸ್ತಂಭವಾಗಿದ್ದ ಎಂದು ನೆನಪಿಸಿಕೊಂಡು ಅಳತೊಡಿದರು. “ಈಗ ಅವನು ಇಲ್ಲ, ಮತ್ತು ನಾವು ಕಳೆದುಹೋಗಿದ್ದೇವೆ. ಆದರೆ ಅವನು ಉದಾತ್ತವಾದದ್ದನ್ನು ಮಾಡುತ್ತಾ ನಿಧನರಾದರು…ನಾನು ಯಾವಾಗಲೂ ಹೆಮ್ಮೆಪಡುವ ವಿಷಯ.”ಎಂದು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.


