ಬೆಂಗಳೂರು: ತಮ್ಮ ಹಾಗೂ ಸರಕಾರದ ವಿರುದ್ಧ ಮಾಟ, ಮಂತ್ರ, ವಾಮಾಚಾರದ ಪ್ರಯೋಗ ನಡೆಯುತ್ತಿದೆ ಎಂಬ ಸ್ಫೋಟಕ ಅಂಶವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಚ್ಚಿಟ್ಟಿದ್ದಾರೆ.
ನನ್ನ ವಿರುದ್ಧ ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ಸ್ಥಳದಲ್ಲಿ ಶತ್ರು ಬೈರವಿ ಯಾಗ ಮಾಡ್ತಿದ್ದಾರಂತೆ, ಅದನ್ನು ಯಾರ್ ಮಾಡ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನೋಡಿ, ನನಗೆ ಯಾರೋ ಹೇಳಿದ್ರು ಎಂದು ಪತ್ರಕರ್ತರ ನಡುವೆಯೇ ಒಂದು ಚೀಟಿ ತೆಗೆದು ತೋರಿಸಿದ್ದಾರೆ.
ನನ್ನ ಮೇಲೆ, ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮತ್ತು ಸರಕಾರದ ಮೇಲೆಯೂ ಈ ಪ್ರಯೋಗ ನಡೆಯುತ್ತಿದೆಯಂತೆ. ನಮ್ಮ ಮೇಲೆ ಅಘೋರಿಗಳ ಮೊರೆ ಹೋಗಿದ್ದಾರಂತೆ. ಇದನ್ನೆಲ್ಲ ಯಾರ್ ಮಾಡ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ, ನಾವು ನಂಬಿರೋ ದೇವರು ನಮ್ಮನ್ನ ಕಾಪಾಡ್ತಾನೆ ಬಿಡಿ ಎಂದಿದ್ದಾರೆ.
ಯಾಗ ಮಾಡೋದಕ್ಕೆ ಎಲ್ಲ ಕೆಂಪು ಬಣ್ಣದ್ದೇ ವಸ್ತುಗಳು ಬೇಕು ಎಂದಿದ್ದಾರAತೆ. ಮೇಕೆ ೨೧, ಎಮ್ಮೆ ೩, ೨೧ ಕುರಿ, ಕಪ್ಪುಬಣ್ಣದ ಹಂದಿ ೫, ಹೀಗೆ ಐದು ರೀತಿಯ ಬಲಿ ಕೊಡಲು ಹೇಳಿದ್ದಾರೆ. ಈ ರೀತಿ ಬಲಿಕೊಟ್ಟು ಪೂಜೆ ಮಾಡಿದ್ರೆ, ನಮ್ಮ ಸರಕಾರಕ್ಕೆ ಒಳ್ಳೇದಾಗುತ್ತಂತೆ, ನನ್ನನ್ನ ಒಳಗಡೆ ಹಾಕಿಸೋದಕ್ಕೆ ಈ ಯಾಗ ಮಾಡ್ತಾವ್ರಂತೆ ಎಂದು ಆರೋಪಿಸಿದ್ದಾರೆ.
ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತಂದಿರುವ ಸಿದ್ದರಾಮಯ್ಯ ಸಂಪುಟದ ಡಿಸಿಎಂ, ತಮ್ಮ ಮೇಲೆ ನಡೆಯುತ್ತಿರುವ ಮೌಢ್ಯದ ಯಾಗದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಮೂಲಕ ಒಂದು ಚರ್ಚೆಯನ್ನಂತೂ ಹುಟ್ಟುಹಾಕಿದ್ದಾರೆ. ಕೊನೆಯಲ್ಲಿ ನಾವು ನಂಬಿರೋ ದೇವರು ನಮ್ಮನ್ನು ಕಾಪಾಡ್ತಾನೆ ಎನ್ನುವ ಮೂಲಕ ತಮ್ಮ ಮೇಲೆ ನಡೆಯುತ್ತಿರುವ ಷಡ್ಯಂತ್ರಕ್ಕೆ, ಹೆಸರೇಳದೆ ವಿರೋಧಿಗಳ ಮೇಲೆ ಆರೋಪಿಸಿದ್ದಾರೆ.
