ನವದೆಹಲಿ: ಕೇಂದ್ರದಲ್ಲಿ ಮತ್ತೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ನರೇಂದ್ರಮೋದಿ ಅವರು ಈ ತಿಂಗಳ 8(ಶನಿವಾರ)ರಂದು 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಮಿತ್ರಕೂಟ ಪಕ್ಷಗಳು ತಮಗಿರುವ ಸಂಸದರ ಸಂಖ್ಯಾಬಲದ ಬೆಂಬಲ ಪತ್ರವನ್ನು ನೀಡಿದ್ದಾರೆ.
ಒಟ್ಟು 294 ಸಂಸದರ ಬೆಂಬಲ ಪತ್ರವನ್ನು ರಾಷ್ಟ್ರಪತಿಗಳಿಗೆ ನೀಡಲಾಗಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಿಸಿದ್ದಾರೆ. ಶನಿವಾರ ರಾತ್ರಿ 8 ಗಂಟೆಗೆ ನರೇಂದ್ರಮೋದಿ ಹಾಗೂ ಸಂಪುಟದ ಸಹೋದ್ಯೋಗಿಗಳಿಗೆ ಅಧಿಕಾರ ಗೌಪ್ಯತೆ ಬೋಧಿಸಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಎನ್‌ಡಿಎ ಮಿತ್ರಪಕ್ಷಗಳ ಎಲ್ಲಾ ಸಂಸದರು ದೆಹಲಿಗೆ ಬರುವಂತೆ ಸೂಚಿಸಲಾಗಿದೆ. ಅಂದು ಎನ್.ಡಿ.ಎ ಮೈತ್ರಿಕೂಟದ ನೂತನ ಸಂಸದರನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದಾರೆ. ಕರ್ನಾಟಕದ 18 ಸಂಸದರು ಗುರುವಾರವೇ ದೆಹಲಿಗೆ ಬರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ಏಕೆಂದರೆ ಮಂಡ್ಯ ಸಂಸದರಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ನವದೆಹಲಿಗೆ ಹೋಗಿ ಎನ್.ಡಿ.ಎ ಸಭೆಯಲ್ಲಿ ಭಾಗವಹಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟವು ಇಂದು ಸಂಜೆ ಮೋದಿ ಅವರನ್ನು ಪ್ರಧಾನಿ ಮಾಡುವ ಸರ್ವಸಮ್ಮತದ ನಿರ್ಣಯಕ್ಕೆ ಬೆಂಬಲ ಸೂಚಿಸಿದೆ. ಮೋದಿಯವರೊಂದಿಗೆ ಮಿತ್ರಪಕ್ಷದ ಹಲವು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಟಿಡಿಪಿ, ಜೆಡಿಯು, ಎಲ್‌ಜೆಪಿ, ಏಕನಾಥ್ ಶಿಂಧೆ ಬಣದ ಶಿವಸೇನೆ, ಜೆಡಿಎಸ್ ಸೇರಿದಂತೆ ಮತ್ತಿತರ ಪ್ರಾದೇಶಿಕ ಪಕ್ಷಗಳ ಮುಖಂಡರು ಮೊದಲ ಹಂತದಲ್ಲೇ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಕರ್ನಾಟಕದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರಾಗುವ ಸಾಧ್ಯತೆ ಇದೆ. ಆದರೆ ಅವರು ಶನಿವಾರವೇ ಪ್ರಮಾಣವಚನ ಸ್ವೀಕರಿಸುತ್ತಾರಾ? ಎಂಬುದಿನ್ನೂ ಖಚಿತವಾಗಿಲ್ಲ.
ಆದರೆ ಕಳೆದ ಬಾರಿ ಬರೋಬ್ಬರಿ 303 ಸಂಸದರನ್ನು ಹೊಂದಿದ್ದ ಕಾರಣಕ್ಕಾಗಿ ಕೇವಲ ಬಿಜೆಪಿ ಸಂಸದರನ್ನು ಮಾತ್ರ ಕೇಂದ್ರ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದರಿಂದ ಸಿಟ್ಟಾಗಿದ್ದ ಜೆಡಿಯು ಎನ್.ಡಿ.ಎ ಮೈತ್ರಿಕೂಟ ತ್ಯಜಿಸಿತ್ತು. ಆದರೆ ಈ ಬಾರಿ ಅರ್ಧದಷ್ಟು ಕ್ಯಾಬಿನೆಟ್ ದರ್ಜೆಯ ಸಚಿವರು ಮಿತ್ರ ಪಕ್ಷಗಳ ಸಂಸದರು ಎಂದು ಅಂದಾಜು ಮಾಡಲಾಗಿದೆ.
ಪರಿಣಾಮ ಕೇಂದ್ರ ಗೃಹ ಸಚಿವ ಸ್ಥಾನ ಅಮಿತ್ ಶಾ ಅವರಿಗೆ ಕೈತಪ್ಪುವ ಸಾಧ್ಯತೆ ಇದೆ. ಜೊತೆಗೆ ಹಣಕಾಸು, ನೀರಾವರಿ, ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವಾರು ಮಹತ್ವದ ಸಂಪುಟ ದರ್ಜೆಯ ಖಾತೆಗಳು ಮಿತ್ರ ಪಕ್ಷಗಳ ಪಾಲಾಗುವ ಸಾಧ್ಯತೆ ಅಧಿಕವಾಗಿದೆ.
