ನವದೆಹಲಿ: ನೀಟ್ ಅಕ್ರಮ ಉಭಯ ಸದನಗಳ ಕಲಾಪದಲ್ಲಿ ಗದ್ದಲ ಸೃಷ್ಟಿಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರಕಾರ ಸೂಕ್ತ ಉತ್ತರ ನೀಡಬೇಕು ಎಂದು ರಾಹುಲ್ ಗಾಂಧಿ ಪಟ್ಟುಹಿಡಿದಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಪ್ರಸ್ತಾಪಿಸಿದರು. ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಸದನದಿಂದ ಯುವಕರಿಗೆ ಸರಿಯಾದ ಸಂದೇಶ ರವಾನೆಯಾಗಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ನ ಮಾಣಿಕಂ ಟ್ಯಾಗೋರ್ ಸೇರಿ ಅನೇಕ ಸಂಸದರು ನೀಟ್ ವಿವಾದದ ಕುರಿತು ಕುರಿತು ಮುಂದೂಡಿಕೆ ನಿರ್ಣಯ ಮಂಡಿಸಿದರು.
ಸ್ಪೀಕರ್ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದರ ಬೇಡಿಕೆಗೆ ಯಾವುದೇ ಭರವಸೆ ನೀಡದ ಕಾರಣಕ್ಕೆ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಮೊದಲು ಚರ್ಚಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಒತ್ತಾಯಿಸಿದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.
ರಾಹುಲ್ ಗಾಂಧಿ ಅವರು, ನಾವು ಪ್ರತಿಪಕ್ಷಗಳು ಮತ್ತು ಸರ್ಕಾರದ ಪರವಾಗಿ ಭಾರತದ ವಿದ್ಯಾರ್ಥಿಗಳಿಗೆ ಜಂಟಿ ಸಂದೇಶ ನೀಡಲು ಬಯಸಿದ್ದೇವೆ. ನಾವು ಇದನ್ನು ಪ್ರಮುಖ ವಿಷಯ ಎಂದು ಪರಿಗಣಿಸುತ್ತೇವೆ. ಆದ್ದರಿಂದ, ನಾವು ವಿದ್ಯಾರ್ಥಿಗಳ ಮೇಲಿನ ಗೌರವದಿಂದ ಯೋಚಿಸಿದ್ದೇವೆ ಎಂದು ಚರ್ಚೆಗೆ ಒತ್ತಾಯಿಸಿದರು. ಆದರೆ, ಸ್ಪೀಕರ್ ಅದಕ್ಕೆ ಅನುಮತಿ ನೀಡಿದ್ದರಿಂದ ಕೋಲಾಹಲ ಉಂಟಾಯಿತು.
ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ವಿಷಯ ಪ್ರಸ್ತಾಪಿಸಿದರು. ಕೂಡಲೇ ಸದನದಲ್ಲಿ ಚರ್ಚೆ ನಡೆಸಬೇಕು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನೀಟ್ ಕುರಿತು ಚರ್ಚೆ ಅಗತ್ಯ. ಆದರೆ, ಸದ್ಯ ಚರ್ಚೆ ಬೇಡ ಎಂದು ಆಡಳಿತ ಪಕ್ಷ ಹಾಗೂ ಆಸನ ಸದಸ್ಯರು ಹೇಳಿದರು ಎಂದು ಖರ್ಗೆ ಹೇಳಿದರು.
ಈ ವಿಚಾರವಾಗಿ ಸದನದಲ್ಲಿ ಗದ್ದಲ ಉಂಟಾಯಿತು. ಅಂತಿಮವಾಗಿ ರಾಜ್ಯಸಭೆಯ ಅಧ್ಯಕ್ಷರು ಸದನದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಈ ಮೂಲಕ ಉಭಯ ಸದನಗಳಲ್ಲಿ ಕಲಾಪ ಆರಂಭವಾದ ಕೂಡಲೇ ಕೋಲಾಹಲ ಉಂಟಾಗಿ ಸದನವನ್ನು ಒಂದು ಗಂಟೆ ಮುಂದೂಡಲಾಯಿತು.