ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆರಾಮ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಮುಂದಿನ 2026–27ನೇ ಶೈಕ್ಷಣಿಕ ವರ್ಷದಿಂದ ಕೆಲ ಜಿಲ್ಲೆಗಳ ಶಾಲೆಗಳಲ್ಲಿ ಶೂಗಳ ಜೊತೆಗೆ ಚಪ್ಪಲಿಗಳನ್ನೂ ನೀಡುವ ಕುರಿತು ಶಿಕ್ಷಣ ಇಲಾಖೆ ಆಲೋಚನೆ ನಡೆಸುತ್ತಿದೆ. ಯಾವ ಜಿಲ್ಲೆಗಳಲ್ಲಿ ಚಪ್ಪಲಿಗೆ ಹೆಚ್ಚು ಅಗತ್ಯವಿದೆ ಎಂಬ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಘೋಷಿಸಿದ ಪಂಚಭಾಗ್ಯಗಳ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಹೊಸ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರಂ, ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಮತ್ತು ಸಾಕ್ಸ್ ನೀಡಲಾಗುತ್ತಿದೆ. ಇದರ ಮುಂದುವರಿಕೆಯಾಗಿ, ಕೆಲವು ಪ್ರದೇಶಗಳ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶೂ ಬದಲಿಗೆ ಅಥವಾ ಶೂ ಜೊತೆಗೆ ಚಪ್ಪಲಿ ವಿತರಿಸುವ ಯೋಚನೆಗೆ ಸರ್ಕಾರ ಬಂದಿದೆ ಎನ್ನಲಾಗಿದೆ.
ಪ್ರಸ್ತಾವಿತ ಯೋಜನೆಯಂತೆ, ಸರಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿನಂತೆ ಶೂ ಮತ್ತು ಎರಡು ಜತೆ ಸಾಕ್ಸ್ ವಿತರಣೆ ಮುಂದುವರೆಯಲಿದೆ. ಜೊತೆಗೆ, ಮಳೆ ಹೆಚ್ಚು ಬೀಳುವ ಅಥವಾ ಬಿಸಿಲು ಹೆಚ್ಚಿರುವ ಜಿಲ್ಲೆಗಳ ಮಕ್ಕಳಿಗೆ ಚಪ್ಪಲಿಯನ್ನೂ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ವಿವರವಾದ ಮಾಹಿತಿ ಸಂಗ್ರಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಪ್ಪಲಿ ವಿತರಣೆಗೆ ತರಗತಿವಾರು ದರ ನಿಗದಿಯನ್ನೂ ಮಾಡಲಾಗಿದೆ ಎನ್ನಲಾಗಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಸುಮಾರು 265 ರೂಪಾಯಿ ಮೌಲ್ಯದ ಚಪ್ಪಲಿ, 6ರಿಂದ 8ನೇ ತರಗತಿ ಮಕ್ಕಳಿಗೆ 295 ರೂಪಾಯಿ ಬೆಲೆಯ ಚಪ್ಪಲಿ ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂಪಾಯಿ ಮೌಲ್ಯದ ಚಪ್ಪಲಿ ನೀಡುವ ಪ್ರಸ್ತಾವ ಇದೆ.
ಈ ನಿರ್ಧಾರದ ಹಿಂದೆ ಪ್ರಮುಖ ಕಾರಣವೆಂದರೆ ಸ್ಥಳೀಯ ಹವಾಮಾನ. ಕೆಲವು ಭಾಗಗಳಲ್ಲಿ ಮಳೆಗಾಲ ಮತ್ತು ಬೇಸಿಗೆಯಲ್ಲಿ ಮಕ್ಕಳು ಶೂ ಹಾಗೂ ಸಾಕ್ಸ್ ಧರಿಸುವುದು ಅಸೌಕರ್ಯಕರವಾಗುತ್ತದೆ. ದೀರ್ಘಕಾಲ ತೇವದಲ್ಲಿರುವ ಶೂಗಳಿಂದ ಕಾಲಿಗೆ ಸೋಂಕು ಉಂಟಾಗುವ ಸಾಧ್ಯತೆ ಇರುವುದರಿಂದ ಚಪ್ಪಲಿ ಹೆಚ್ಚು ಸೂಕ್ತವೆನ್ನಲಾಗಿದೆ. ಜೊತೆಗೆ, ಪಾದದ ಗಾತ್ರದ ವ್ಯತ್ಯಾಸಕ್ಕೂ ಚಪ್ಪಲಿ ಅನುಕೂಲಕರವಾಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಗಮನಾರ್ಹವೆಂದರೆ, ಇದೇ ರೀತಿಯ ಯೋಚನೆ 2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ನಡೆದಿತ್ತು. ಆಗ ಸುಮಾರು 54 ಲಕ್ಷ ವಿದ್ಯಾರ್ಥಿಗಳಿಗೆ ಚಪ್ಪಲಿ ವಿತರಿಸಲು ಸುಮಾರು 120 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಶೂ ಮತ್ತು ಸಾಕ್ಸ್ ಬದಲಿಗೆ ಚಪ್ಪಲಿ ನೀಡಿದರೆ ನಿಗದಿತ ಅನುದಾನದಲ್ಲೇ ಉತ್ತಮ ಗುಣಮಟ್ಟದ ವಸ್ತು ಒದಗಿಸಬಹುದು ಎಂಬ ಚರ್ಚೆ ನಡೆದಿತ್ತು. ಇದೀಗ ಆ ಯೋಚನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಚಪ್ಪಲಿಗೆ ಬೇಡಿಕೆ ಇರುವ ಜಿಲ್ಲೆಗಳ ವಿವರಗಳನ್ನು ಶಿಕ್ಷಣ ಇಲಾಖೆ ಸಂಗ್ರಹಿಸುತ್ತಿದೆ ಎಂದು ಚಂದ್ರಶೇಖರ ನುಗ್ಗಲಿ ಸ್ಪಷ್ಟಪಡಿಸಿದ್ದಾರೆ.

