ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಬೆಳವಣಿಗೆಯಲ್ಲಿ, ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಳ್ಳಾರಿಯಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯೊಂದರಲ್ಲಿ ಮಾಡಿದ ಭಾಷಣದ ವೇಳೆ ಅಪ್ರಾಪ್ತ ಸಂತ್ರಸ್ತೆಯ ಗುರುತಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂಬ ಆರೋಪದ ಮೇರೆಗೆ, ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರತಿಭಟನಾ ಸಮಾವೇಶದಲ್ಲಿ ನಡೆದ ಎಡವಟ್ಟು
ಇತ್ತೀಚೆಗೆ ಬಳ್ಳಾರಿಯ ಎಪಿಎಂಸಿ ಮೈದಾನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶ್ರೀರಾಮುಲು ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ ವಿರುದ್ಧ ಟೀಕೆ ನಡೆಸುವ ವೇಳೆ, ಡ್ರಗ್ಸ್ ಮಾಫಿಯಾ ಮತ್ತು ಕಾನೂನು ಸುವ್ಯವಸ್ಥೆ ವಿಚಾರ ಪ್ರಸ್ತಾಪಕ್ಕೆ ಬಂದಿತು. ಅದೇ ವೇಳೆ, ಇತ್ತೀಚೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯ ಹೆಸರನ್ನು ಸೇರಿದಂತೆ ಆಕೆಯ ಸಮುದಾಯ ಹಾಗೂ ಓದುತ್ತಿರುವ ಶಿಕ್ಷಣ ಸಂಸ್ಥೆಯ ವಿವರಗಳನ್ನು ಉಲ್ಲೇಖಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪೋಕ್ಸೊ ಕಾಯ್ದೆಯ ಪ್ರಕಾರ, ಸಂತ್ರಸ್ತೆಯ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಸ್ವಯಂಪ್ರೇರಿತ ಕ್ರಮ: ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಮೊಹಮ್ಮದ್ ರಫಿಕ್ ನೀಡಿದ ಮಾಹಿತಿಯ ಮೇರೆಗೆ, ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ 2012ರ ಕಲಂ 23(1) ಮತ್ತು 23(2) ಜೊತೆಗೆ ಜುವೆನೈಲ್ ಜಸ್ಟಿಸ್ ಕಾಯ್ದೆಯ ಸೆಕ್ಷನ್ 74ರ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ.
ಹಿಂದಿನ ಗಲಾಟೆಗಳ ಹಿನ್ನಲೆ: ಬಳ್ಳಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಾತಾವರಣ ಉದ್ವಿಗ್ನವಾಗಿಯೇ ಇದೆ. ಜನವರಿ 1ರಂದು ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದ ಬ್ಯಾನರ್ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಂಭೀರ ಸಂಘರ್ಷ ಉಂಟಾಗಿತ್ತು. ಆ ಘಟನೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ರಾಜಶೇಖರ್ ಎಂಬ ಯುವಕ ಮೃತಪಟ್ಟಿದ್ದಾನೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಈಗಾಗಲೇ ಕೊಲೆ ಯತ್ನ ಸೇರಿದಂತೆ ಹಲವು ಆರೋಪಗಳು ದಾಖಲಾಗಿದ್ದು, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಇದೀಗ ಪೋಕ್ಸೊ ಪ್ರಕರಣವೂ ಸೇರ್ಪಡೆಯಾಗಿ ಶ್ರೀರಾಮುಲು ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಹಿಂದೆಯೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದ ಅವರು, ಈ ಬಾರಿ ಕಾನೂನಿನಿಂದ ಕಟ್ಟುನಿಟ್ಟಾಗಿ ರಕ್ಷಿಸಲ್ಪಟ್ಟಿರುವ ಅಪ್ರಾಪ್ತ ಸಂತ್ರಸ್ತೆಯ ವಿವರಗಳನ್ನು ಸಾರ್ವಜನಿಕವಾಗಿ ಹೇಳಿರುವ ಆರೋಪದಿಂದ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ.

