ಬೆಂಗಳೂರು: ಡಿಜಿಪಿ ರಾಮಚಂದ್ರರಾವ್‌ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಕುಂದಾನಗರಿ ಬೆಳಗಾವಿಯೊಂದಿಗಿನ ನಂಟು ಇರಬಹುದೆಂಬ ಶಂಕೆ ಇದೀಗ ಮೂಡಿದೆ. ಸುಮಾರು ಎಂಟು ವರ್ಷಗಳ ಹಿಂದೆ ರಾಮಚಂದ್ರರಾವ್ ಬೆಳಗಾವಿಯಲ್ಲಿ ಐಜಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ವಿಡಿಯೋದಲ್ಲಿರುವ ಮಹಿಳೆಯೂ ಬೆಳಗಾವಿ ನಿವಾಸಿಯಾಗಿರಬಹುದು ಎಂಬ ಮಾಹಿತಿ ಹೊರಬಂದಿದ್ದು, ಈ ಸಂಬಂಧ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಗತ್ಯ ದಾಖಲೆಗಳು ಮತ್ತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ಬೆಳಗಾವಿ ಐಜಿ ಕಚೇರಿಯಲ್ಲೇ ಘಟನೆ?: ಆ ಸಮಯದಲ್ಲಿ ರಾಮಚಂದ್ರರಾವ್ ಬೆಳಗಾವಿ ಐಜಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೇ ಅವಧಿಯಲ್ಲಿ ಐಜಿ ಕಚೇರಿಯೊಳಗೇ ಅಸಭ್ಯ ಚಟುವಟಿಕೆಗಳು ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಆ ಕಚೇರಿ ಸಂಪೂರ್ಣ ನವೀಕರಣಗೊಂಡಿದ್ದು, ಹಿಂದಿನ ವ್ಯವಸ್ಥೆಗಳು ಈಗಿಲ್ಲ ಎನ್ನಲಾಗಿದೆ. ಮಹಿಳೆಯೊಂದಿಗೆ ರಾಮಚಂದ್ರರಾವ್ ಹೊಂದಿದ್ದ ಸಂಪರ್ಕಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ತನಿಖಾ ವಲಯಕ್ಕೆ ಲಭ್ಯವಾಗಿದ್ದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ.
ತಪ್ಪಿತಸ್ಥರಿಗೆ ಕಾನೂನು ಕ್ರಮ ಖಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್: ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಪ್ಪು ಮಾಡಿದವರು ಯಾರು ಆಗಿರಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದರು. ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಅಸಭ್ಯ ವರ್ತನೆಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಯಾದರೂ ಸಹ ತಪ್ಪಿತಸ್ಥರೆಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ನ್ಯಾಯ ಸಿಗುವವರೆಗೆ ತನಿಖೆ ಮುಂದುವರಿಯುವುದು ಸರ್ಕಾರದ ನಿಲುವು ಎಂದರು.
ನಿವೃತ್ತಿಗೆ ಕೆಲವೇ ತಿಂಗಳು ಬಾಕಿ: ಡಿಜಿಪಿ ರಾಮಚಂದ್ರರಾವ್ ಅವರಿಗೆ ಇನ್ನು ನಾಲ್ಕು ತಿಂಗಳಲ್ಲಿ ನಿವೃತ್ತಿಯಾಗುವ ಸಮಯ ಸಮೀಪಿಸುತ್ತಿದ್ದಾಗಲೇ ಈ ವಿವಾದ ಸ್ಫೋಟಗೊಂಡಿದೆ. ಇತ್ತೀಚೆಗೆ ಅವರ ಕುಟುಂಬವೂ ಸುದ್ದಿಯಲ್ಲಿತ್ತು. ಕೆಲವು ತಿಂಗಳುಗಳ ಹಿಂದೆ ಅವರ ಮಲಮಗಳು, ನಟಿ ರನ್ಯಾ ರಾವ್, ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದರು.
ಈ ಎಲ್ಲಾ ಬೆಳವಣಿಗೆಗಳು ರಾಮಚಂದ್ರರಾವ್ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿವೆ.

