ಹನಿಮೂನ್‌ನಿಂದ ಅರ್ಧಕ್ಕೆ ವಾಪಸ್: ನವವಿವಾಹಿತೆ ಆತ್ಮಹತ್ಯೆ

Share It

ಬೆಂಗಳೂರು: ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿ ಇತ್ತೀಚೆಗೆ ಹನಿಮೂನ್‌ಗೆ ಹೋಗಿ, ಅರ್ಧಕ್ಕೆ ವಾಪಸ್ಸಾಗಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ೨೬ ವರ್ಷದ ಗಾನವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ವಿದ್ಯಾರಣ್ಯಪುರ ನಿವಾಸಿ ಸೂರಜ್ ಜೊತೆ ಗಾನವಿ ಕಳೆದ ಅಕ್ಟೋಬರ್ ೨೯ರಂದು ಮದುವೆ ಮಾಡಿಕೊಂಡಿದ್ದರು. ಒಂದು ತಿಂಗಳ ಬಳಿಕ ಗಂಡನ ಮನೆಯವರ ಬೇಡಿಕೆಯಂತೆ ಗಾನವಿ ಪೋಷಕರು ೪೦ ಲಕ್ಷ ರೂಪಾಯಿ ಖರ್ಚು ಮಾಡಿ ಅರಮನೆ ಮೈದಾನದಲ್ಲಿ ಆರತಕ್ಷತೆ ಮಾಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ಹನಿಮೂನ್‌ಗಾಗಿ ದಂಪತಿ ಶ್ರೀಲಂಕಾಕ್ಕೆ ತೆರಳಿದ್ದರು. ಇಬ್ಬರು ನಡುವೆ ವೈಮನಸ್ಸು ಮೂಡಿದ ಪರಿಣಾಮ ಅರ್ಧದಲ್ಲಿ ಹನಿಮೂನ್ ಪ್ರವಾಸ ಮೊಟಕುಗೊಳಿಸಿ ನಗರಕ್ಕೆ ಬಂದಿದ್ದರು. ಗಂಡನ ಮನೆಯವರು ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದನ್ನು ತಾಳಲಾರದೆ ಗಾನವಿ ನಿನ್ನೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯುವತಿ ತಂದೆ ಶಶಿಕುಮಾರ್ ದೂರಿನಲ್ಲಿ ತಿಳಿಸಿದ್ಧಾರೆ.

ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣದಲ್ಲಿ ಸೂರಜ್ ಹಾಗೂ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ಧಾರೆ.


Share It

You May Have Missed

You cannot copy content of this page