ಮದುವೆಯಾದ ಒಂದೇ ತಿಂಗಳಿಗೆ ನವವಿವಾಹಿತೆಯ ಸಾವು: ವರದಕ್ಷಿಣೆ ಕಿರುಕುಳ ಆರೋಪ
ಬೆಂಗಳೂರು: ಮದುವೆಯಾದ ಒಂದು ತಿಂಗಳೊಳಗೆ ನವವಿವಾಹಿತೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿ.ಕೆ.ಐಶ್ವರ್ಯ (೨೬) ಮೃತ ನವವಿವಾಹಿತೆ. ಮಗಳ ಸಾವಿಗೆ ಅಳಿಯ ಹಾಗೂ ಆತನ ಮನೆಯವರೇ ಕಾರಣ ಎಂದು ಆರೋಪಿಸಿ ಮೃತರ ತಂದೆ ಕೃಷ್ಣ ಅವರು ದೂರು ನೀಡಿದ್ದಾರೆ. ಈ ಸಂಬAಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು, ಮೃತರ ಪತಿ ಲಿಖಿತ್ ಸಿಂಹ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ಐಶ್ವರ್ಯ ಅವರನ್ನು ಲಿಖಿತ್ ಸಿಂಹ ಅವರು ಕಳೆದ ತಿಂಗಳು ನ.೨೬ರಂದು ವಿವಾಹವಾಗಿದ್ದರು. ಮಗಳು-ಅಳಿಯ ಹಾಗೂ ಅವರ ಮನೆಯವರು ಮಲ್ಲಸಂದ್ರದಲ್ಲಿ ವಾಸವಾಗಿದ್ದರು. ಮದುವೆ ಮುನ್ನ ನಡೆದ ಮಾತುಕತೆಯಂತೆ ವರನಿಗೆ ವರದಕ್ಷಿಣೆ ನೀಡಲಾಗಿತ್ತು. ಹೀಗಿದ್ದರೂ ಕೌಟುಂಬಿಕ ಕಲಹದಿಂದ ಮಗಳಿಗೆ ಗಂಡ ಹಾಗೂ ಆತನ ಮನೆಯವರು ಚಿತ್ರಹಿಂಸೆ ನೀಡಿದ್ದರು ಎಂದು ದೂರಿನಲ್ಲಿ ಕೃಷ್ಣ ಆರೋಪಿಸಿದ್ಧಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಡಿ.೨೪ರಂದು ಮನೆಗೆ ಹೋಗಿ ರಾಜಿಸಂಧಾನ ಮಾಡಿಸಿದ್ದೆ. ಮಾತುಕತೆ ಬಳಿಕ ಸಂಜೆ ಊರಿಗೆ ಹೋಗಿದ್ದೆ. ಈ ಮಧ್ಯೆ ಗಂಡನ ಮನೆಯವರು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಕೃಷ್ಣ ಆಪಾದಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿತರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ಧಾರೆ.


