ಸುದ್ದಿ

ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆ ಇದೆ: ಈಶ್ವರಪ್ಪ

Share It

ಶಿವಮೊಗ್ಗ : ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ. ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆ ಇದೆ. ಇನ್ನು ನಿರ್ಧಾರ ಕೈಗೊಂಡಿಲ್ಲ. ಹಿಂದೂ ಹೋರಾಟಗಾರರಿಗೆ ಮತ್ತು ಹಿಂದುತ್ವಕ್ಕೆ ನ್ಯಾಯ ಸಿಗಲಿ. ಅಪ್ಪ-ಮಕ್ಕಳ ಕೈಯಲ್ಲಿ ಬಿಜೆಪಿ ಇರುವುದು ತಪ್ಪು. ಈ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ.

ತುಂಗಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿ ಬಿದ್ದಿದ್ದಾರೆ. ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಈ ಹಗರಣದಲ್ಲಿ ಸಿಎಂ ಕುಟುಂಬದವರು ಭಾಗಿಯಾಗಿದ್ದಾರೆ. ಮುಡಾ ಅಕ್ರಮ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ದೇಶದ ಗಮನ ಸೆಳೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀನಾಮೆ ನೀಡಿಲ್ಲ. ಮಾಜಿ ಸಚಿವ ಬಿ.ನಾಗೇಂದ್ರ, ಬಸವರಾಜ ದದ್ದಲ್​ರನ್ನು ಕೂಡಲೇ ಬಂಧಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ನೇರವಾಗಿ ಹಿಂದು ಸಮಾಜ ಟೀಕೆ ಮಾಡುವ ಧೈರ್ಯ ಯಾರು ಮಾಡಿರಲಿಲ್ಲ. ಈಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದು ಧರ್ಮಕ್ಕೆ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತ ಬರದಿರುವುದು ರಾಹುಲ್ ಗಾಂಧಿಗೆ ಖುಷಿ ತರಿಸಿದೆ. ಹಿಂದೂಗಳಿಗೆ ರಾಹುಲ್ ಗಾಂಧಿ ನೋವುಂಟು ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗೌರವ ಬರುವ ರೀತಿ ನಡೆದುಕೊಳ್ಳಲಿ. ಇಲ್ಲದಿದ್ದರೆ ಇಡೀ ಹಿಂದೂ ಸಮಾಜ ತಿರುಗಿ ಬೀಳಲಿದೆ ಎಂದು ಈಶ್ವರಪ್ಪ ಎಚ್ಚರಿಸಿದರು.


Share It

You cannot copy content of this page