ಬೆಂಗಳೂರು: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್, ಜೈಲಿನ ಬಳಿಗೆ ತಮ್ಮನ್ನು ಭೇಟಿ ಮಾಡಲು ಯಾರೂ ಬರದಂತೆ ಮನವಿ ಮಾಡಿಕೊಂಡಿದ್ದಾರೆ.
ನಟ ದರ್ಶನ್ ಜೈಲು ಸೇರಿದ ದಿನದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿಗೆ ನೂರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ದರ್ಶನ್ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡು, ಪೊಲೀಸರು ನಿರಾಕರಿಸಿದಾಗ ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳುಗೆ ಮನವಿ ಮಾಡಿಕೊಂಡಿದ್ದು, ನನ್ನ ಭೇಟಿಗೆ ಜೈಲಿನ ಬಳಿ ಯಾರೂ ಬರಬೇಡಿ, ಜೈಲಿನ ನಿಯಮಗಳ ಪ್ರಕಾರ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ, ಸುಮ್ಮನೇ ಬಂದು ಕಾಯ್ದು ಹೋಗುವುದು ನನಗೆ ಬೇಸರ ತರಿಸುವ ಸಂಗತಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗುರುವಾರ ಸೌಮ್ಯಾ ವಿಶೇಷ ಚೇತನ ಯುವತಿ ದರ್ಶನ್ ನೋಡುವ ಸಲುವಾಗಿ ಜೈಲಿಗೆ ಬಂದಿದ್ದರು. ದರ್ಶನ್ ಕೊಡಿಸಿದ್ದು ಎನ್ನಲಾದ ಆಟೋದಲ್ಲಿ ಆಗಮಿಸಿದ್ದ ಸೌಮ್ಯಾ, ದರ್ಶನ್ ನೋಡಿಯೇ ತೀರುವುದಾಗಿ ಹಠ ಹಿಡಿದಿದ್ದರು. ಈ ವಿಷಯ ಗೊತ್ತಾಗಿ ದರ್ಶನ್ ಬೇಸರ ಮಾಡಿಕೊಂಡು, ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ವ್ಯಕ್ತಿಯೂ ಕೂಡ ಬಂದಿದ್ದು, ಆತ ಕೂಡ ದರ್ಶನ್ ಕೊಡಿಸಿದ ಮೂರು ಚಕ್ರದ ಸ್ಕೂಟರ್‌ನಲ್ಲಿ ಜೈಲಿನ ಬಳಿಗೆ ಬಂದಿದ್ದರು. ಹೀಗೆ, ಪದೇಪದೆ ನೀವೆಲ್ಲ ಬಂದು ಇಲ್ಲಿ ತೊಂದರೆ ಅನುಭವಿಸುವುದು ಬೇಡ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.