ರಾಜಕೀಯ ಸುದ್ದಿ

18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ನೇಮಕ

Share It

18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ.
ಇಂದು ಬೆಳಗ್ಗೆ ಲೋಕಸಭಾ ಕಲಾಪದಲ್ಲಿ ನಡೆದ ಸ್ಪೀಕರ್ ಚುನಾವಣೆಯಲ್ಲಿ ಓಂ ಬಿರ್ಲಾ ಅವರು ತಮ್ಮ ಪ್ರತಿಸ್ಪರ್ಧಿ ಇಂಡಿಯಾ ಮೈತ್ರಿಕೂಟದ ಕೆ.ಸುರೇಶ್ ಅವರನ್ನು ಸೋಲಿಸಿ ಮತ್ತೊಮ್ಮೆ ಲೋಕಸಭೆ ಸ್ಪೀಕರ್ ಆಗಿ ಮರುನೇಮಕಗೊಂಡಿದ್ದಾರೆ.

ಇದಕ್ಕೂ ಮುನ್ನ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಒಪ್ಪದ ಇಂಡಿಯಾ ಮೈತ್ರಿಕೂಟ ತನ್ನ ಸ್ಪರ್ಧಿಯನ್ನಾಗಿ ಕಾಂಗ್ರೆಸ್ ಸಂಸದ ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಬಿಜೆಪಿಯ ಎನ್.ಡಿ.ಎ ಅಭ್ಯರ್ಥಿ ಓಂ ಬಿರ್ಲಾ ಅವರು ಸ್ಪೀಕರ್ ಚುನಾವಣೆಯಲ್ಲಿ 293 ಸಂಸದರ ಬೆಂಬಲ ಪಡೆದರು. ಜೊತೆಗೆ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈ.ಎಸ್.ಆರ್.ಸಿ.ಪಿ‌ ಪಕ್ಷದ 4 ಸಂಸದರು ಸಹ ಓಂ ಬಿರ್ಲಾ ಅವರಿಗೆ ಬೆಂಬಲ ಸೂಚಿಸಿದರು.

ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕೆ.ಸುರೇಶ್ ಅವರು 232 ಸಂಸದರ ಬೆಂಬಲ ಪಡೆದ ಕಾರಣ ಓಂ ಬಿರ್ಲಾ ಅವರು ಮತ್ತೊಮ್ಮೆ ಲೋಕಸಭಾ ಸ್ಪೀಕರ್ ಆಗಿ ಚುನಾಯಿತರಾದರು. ಈ ಮೂಲಕ‌ 3 ಬಾರಿ ಸಂಸದರಾಗಿರುವ ಬಿಜೆಪಿಯ ಹಿರಿಯ ಮುಖಂಡರಾದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.

ಲೋಕಸಭೆಯ ಸ್ಪೀಕರ್ ಆಗಿ ನೇಮಕರಾದ ಓಂ ಬಿರ್ಲಾ ಅವರನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕೈಕುಲುಕಿ ಅಭಿನಂದಿಸಿದರು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಸಂಸದರು, ಕೇಂದ್ರ ಸಚಿವರು, ಪ್ರತಿಪಕ್ಷಗಳ ನಾಯಕರು, ಸಂಸದರು ಸ್ಪೀಕರ್ ಓಂ ಬಿರ್ಲಾ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು “ಎನ್.ಡಿ.ಎ ಪರವಾಗಿ ಓಂ ಬಿರ್ಲಾ ಅವರು ಸ್ಪೀಕರ್ ಆಗಿರುವ ಕಾರಣ ಇದೀಗ ಕಾಂಗ್ರೆಸ್ ಪಕ್ಷದ ಸಂಸದರೊಬ್ಬರು ಅವಿರೋಧವಾಗಿ ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಆಗಿ ನೇಮಕಗೊಳ್ಳಲು ಅವಕಾಶವಿದೆ” ಎಂದು ತಿಳಿಸಿದರು.


Share It

You cannot copy content of this page