ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರಕಾರ ಪತನದ ಕುರಿತು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ನಮ್ಮ ಸರಕಾರ ಬಂಡೆಯಂತೆ ಇರುತ್ತದೆ ಎಂದು ಡಿಸಿಎಂ ಡಿಕೆಶಿ ಕೈಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ನಡುವೆ ತಿಕ್ಕಾಟ ನಡೆಯುತ್ತಿದೆ ಎಂಬ ಮಾತುಗಳು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ತೂರಿಬಂದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಹೀಗೆ ಉತ್ತರ ನೀಡಿದ್ದಾರೆ.
ಮೈಸೂರಿನಲ್ಲಿ ಜಂಟಿಯಾಗಿ ನಡೆಯುತ್ತಿದ್ದ ಸುದ್ದಿಗೋಷ್ಠಿಯ ವೇಳೆ ಸಿಎಂ ಸಿದ್ದರಾಮಯ್ಯ ನಮ್ಮ ಸರಕಾರ 5 ವರ್ಷ ಬಂಡೆಯಂತೆ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಅದೇ ವೇಳೆ ಮುಗುಳು ನಗುತ್ತಾ ನಿಂತಿದ್ದ ಡಿಸಿಎಂ ಡಿಕೆಶಿ ಕೈಹಿಡಿದು ಮೇಲೆತ್ತುವ ಮೂಲಕ ನಾವಿಬ್ಬರು ಒಗ್ಗಟ್ಟಿನಿಂದ ಇದ್ದೇವೆ ಎಂದು ತೋರಿಸುವ ಪ್ರಯತ್ನ ನಡೆಸಿದರು.
ಇದೀಗ ಸಿಎಂ ಅವರ ಈ ನಡೆ ಅನೇಕ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಅಧಿಕಾರ ಹಂಚಿಕೆ ಸೂತ್ರದಂತೆ ನಾವು ಬಂಡೆಗೆ ಅಧಿಕಾರ ಬಿಟ್ಟುಕೊಡುತ್ತೇವೆ. ಹೀಗಾಗಿ, ನಮ್ಮ ಸರಕಾರ ಐದು ವರ್ಷ ಬಂಡೆಯಂತೆ ಇರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ.
ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿಲ್ಲ. ನಮ್ಮ ಸರಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂದು ಹೇಳಿದ್ದಾರೆ. ಅದಲ್ಲದೇ ಬಂಡೆಯಂತೆ ಸರಕಾರ ಇರುತ್ತದೆ ಎಂದಿದ್ದಾರೆ. ಈ ಮಾತಿನ ಅರ್ಥ ಶಿವಕುಮಾರ್ ಅವರಿಗೆ ನಾನು ಅಧಿಕಾರ ಬಿಟ್ಟುಕೊಡುತ್ತೇನೆ ಎಂಬುದೇ ಆಗಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.