ಶ್ರೀನಗರ : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾದ ಸ್ಥಳೀಯ ಭಯೋತ್ಪಾದಕ ಆದಿಲ್ ಥೋಕರ್ ಮನೆಯನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ನೆಲಸಮಗೊಳಿಸಿದೆ.
ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆಯಾಗಿದ್ದು, ಅದರಲ್ಲಿ ಆದಿಲ್ ಥೋಕರ್ ಭಾಗಿಯಾಗಿದ್ದಾನೆ ಎಂಬ ಅನುಮಾನಗಳು ಬಲವಾಗಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆತನ ನಿವಾಸದ ಮೇಲೆ ಜಮ್ಮ ಮತ್ತು ಕಾಶ್ಮೀರ ಸರಕಾರ ದಾಳಿ ನಡೆಸಿ, ಮನೆಯನ್ನು ಧ್ವಂಸಗೊಳಿಸಿದೆ.
೨೦೧೮ರಲ್ಲಿ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಕಾನೂನುಬದ್ಧವಾಗಿಯೇ ಪ್ರಯಾಣ ಮಾಡಿದ್ದ ಥೋಕರ್, ಕಳೆದ ವರ್ಷ ಜಮ್ಮ ಮತ್ತು ಕಾಶ್ಮೀರಕ್ಕೆ ರಹಸ್ಯವಾಗಿ ವಾಪಸ್ಸಾಗಿದ್ದ. ಪಾಕಿಸ್ತಾನದಲ್ಲಿ ಆತ ಇದ್ದಷ್ಟು ದಿನ ಅಲ್ಲಿ ಭಯೋತ್ಪಾದನಾ ತರಬೇತಿ ಪಡೆದುಕೊಂಡು ಬಂದಿದ್ದಾನೆ ಎಂಬ ಅಂಶ ಪತ್ತೆಯಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ಆತ ಪಾಕಿಸ್ತಾನಿ ಭಯೋತ್ಪಾದಕರಿಗೆ ಮಾರ್ಗದರ್ಶನ ಮತ್ತು ಲಾಜಿಸ್ಟಿಕ್ ಸಂಯೋಜಕನಾಗಿ ಸೇವೆ ಸಲ್ಲಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಲಷ್ಕರ್ ಎ ತೈಬಾ ಸಂಘಟನೆಯ ಮೂವರು ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಆಲಿ ಭಾಯ್ ಮತ್ತು ಹಾಶಿಮ್ ಮೂಸಾ ಅವರ ಬಂಧನಕ್ಕೆ ಅನಂತ್ ನಾಗ್ ಜಿಲ್ಲೆಯ ಪೊಲೀಸರು ೨೦ ಲಕ್ಷ ಬಹುಮಾನ ಘೋಷಣೆ ಮಾಡಿದೆ.