ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರೆದ ದಂಗೆಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಭದ್ರತಾ ಸಿಬ್ಬಂದಿಗಳಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಪರಿಣಾಮವಾಗಿ ಮೂವರು ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರು ದಾಳಿ ನಡೆಸಿದ್ದು, ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದು BLA ಹೊಸ ಸಾಗರ ಕಾರ್ಯತಂತ್ರದ ಭಾಗವಾಗಿದ್ದು, ಗ್ವಾದರ್ ಬಂದರು ಭದ್ರತೆಗೂ ಅಪಾಯ ಎದುರಾಗಿದೆ. ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಭೂಮಿಯ ಯುದ್ಧ ಈಗ ಸಮುದ್ರಕ್ಕೂ ವ್ಯಾಪಿಸಿದ್ದು, ಪ್ರದೇಶದಲ್ಲಿ ಚೀನಾ ಹೂಡಿಕೆಗೆ ನಡುಕ ಹುಟ್ಟಿಸಿದೆ.

