ಟಿ20 ವಿಶ್ವಕಪ್ 2026ರಲ್ಲಿ ಭಾಗವಹಿಸುವ ಬಗ್ಗೆ ಹಲವು ಚರ್ಚೆಗಳ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೊನೆಗೂ 15 ಸದಸ್ಯರ ಅಧಿಕೃತ ತಂಡವನ್ನು ಪ್ರಕಟಿಸಿದೆ. ಈ ಮೂಲಕ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಆಡುವುದು ಖಚಿತವಾಗಿದೆ. ತಂಡದ ನಾಯಕತ್ವವನ್ನು ಸಲ್ಮಾನ್ ಅಲಿ ಅಘಾ ಅವರಿಗೆ ನೀಡಲಾಗಿದೆ.
ಈ ತಂಡದಲ್ಲಿ ಪ್ರಮುಖ ಆಕರ್ಷಣೆಯಾಗಿ ಬಾಬರ್ ಅಜಮ್‌ಗೆ ಮತ್ತೆ ಅವಕಾಶ ನೀಡಲಾಗಿದೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿ ಬ್ಯಾಟ್ಸ್‌ಮನ್ ಆಗಿರುವ ಬಾಬರ್ ತಂಡಕ್ಕೆ ಮರಳಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರಿಗೆ ಸ್ಥಾನ ಸಿಗಲಿಲ್ಲ. ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಈ ಬಾರಿ ಆಯ್ಕೆಯಾಗದೆ ಅಚ್ಚರಿ ಮೂಡಿಸಿದ್ದಾರೆ.
ವಿಕೆಟ್‌ಕೀಪರ್ ವಿಭಾಗದಲ್ಲಿ ಮೊಹಮ್ಮದ್ ನಫೆ ಮತ್ತು ಸಾಹಿಬ್‌ಜಾದಾ ಫರ್ಹಾನ್ ಅವರಿಗೆ ಅವಕಾಶ ನೀಡಲಾಗಿದೆ. ವೇಗದ ದಾಳಿ ವಿಭಾಗದಲ್ಲಿ ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಪ್ರಮುಖ ಪಾತ್ರವಹಿಸಲಿದ್ದಾರೆ.
ಆಲ್‌ರೌಂಡರ್‌ಗಳ ಮೇಲೆ ಒತ್ತು
ಪಿಸಿಬಿ ಈ ಬಾರಿ ಆಲ್‌ರೌಂಡರ್‌ಗಳ ಮೇಲೆ ವಿಶೇಷ ಗಮನ ಹರಿಸಿದೆ. ಫಹೀಮ್ ಅಶ್ರಫ್, ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ತಂಡದ ಸಮತೋಲನವನ್ನು ಬಲಪಡಿಸುವ ಪ್ರಮುಖ ಆಟಗಾರರಾಗಿದ್ದಾರೆ. ಆಯ್ಕೆ ಕುರಿತು ಮಾತನಾಡಿದ ಜಾವೇದ್, “ಶ್ರೀಲಂಕಾದ ಮೈದಾನಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಎ ಗುಂಪಿನಲ್ಲಿ ಪಾಕಿಸ್ತಾನ
ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತ, ನಮೀಬಿಯಾ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ತಂಡಗಳು ಸೇರಿವೆ.
ಪಾಕಿಸ್ತಾನ ಟಿ20 ವಿಶ್ವಕಪ್ 2026 ತಂಡ
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ಮೊಹಮ್ಮದ್ ನಫಾಯ್ (wk), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್‌ಜಾದಾ ಫರ್ಹಾನ್, ಶಾಹೀನ್ ಶಾ ಅಫ್ರಿದಿ, ಶಾದಾಬ್ ಖಾನ್, ಉಸ್ಮಾನ್ ಖಾನ್ (ವಾರ), ಉಸ್ಮಾನ್ ತಾರಿಕ್.
ಪಾಕಿಸ್ತಾನ ಪಂದ್ಯಗಳ ವೇಳಾಪಟ್ಟಿ
ಮೊದಲ ಪಂದ್ಯ: ನೆದರ್‌ಲ್ಯಾಂಡ್ಸ್ ವಿರುದ್ಧ – ಫೆಬ್ರವರಿ 7, ಕೊಲಂಬೊ
ಎರಡನೇ ಪಂದ್ಯ: ಯುಎಸ್‌ಎ ವಿರುದ್ಧ – ಫೆಬ್ರವರಿ 10, ಕೊಲಂಬೊ
ಮೂರನೇ ಪಂದ್ಯ: ಭಾರತ ವಿರುದ್ಧ – ಫೆಬ್ರವರಿ 15, ಕೊಲಂಬೊ
ನಾಲ್ಕನೇ ಪಂದ್ಯ: ನಮೀಬಿಯಾ ವಿರುದ್ಧ – ಫೆಬ್ರವರಿ 18, ಕೊಲಂಬೊ
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸಾಧನೆ
ಪಾಕಿಸ್ತಾನ ಮೊದಲ ಟಿ20 ವಿಶ್ವಕಪ್ ಆವೃತ್ತಿಯಲ್ಲಿಯೇ ಫೈನಲ್ ತಲುಪಿತ್ತು. 2009ರಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದಿತು. 2010, 2012 ಮತ್ತು 2021ರಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. 2007 ಮತ್ತು 2022ರಲ್ಲಿ ರನ್ನರ್‌ಅಪ್ ಸ್ಥಾನ ಗಳಿಸಿತ್ತು.
ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಖಚಿತ
ತಂಡವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಪಿಸಿಬಿ ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ಭಾಗವಹಿಸುವುದನ್ನು ಸ್ಪಷ್ಟಪಡಿಸಿದೆ. ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿರುವುದರಿಂದ ವಿಶ್ವಕಪ್ ಬಹಿಷ್ಕಾರ ಕುರಿತ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಬಿದ್ದಿದೆ.

