ಪ್ಯಾರಿಸ್ ನಲ್ಲಿ ಭಾನುವಾರ(ಆಗಸ್ಟ್ 4) ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದ ಪುರುಷರ ಸಿಂಗಲ್ಸ್ ರೋಚಕ ಸೆಮಿಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ಭಾರತದ ಲಕ್ಷ್ಯ ಸೇನ್ ನೇರ ಗೇಮ್ ನಲ್ಲಿ ಸೋತರು. ಇದರಿಂದ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಮೊಟ್ಟಮೊದಲ ಒಲಿಂಪಿಕ್ ಚಿನ್ನ ಅಥವಾ ಬೆಳ್ಳಿಯ ಕನಸು ನುಚ್ಚು ನೂರಾಯಿತು.
54 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ಆಕ್ಸೆಲ್ಸೆನ್ ವಿರುದ್ಧ ಲಕ್ಷ್ಯ ಸೇನ್ 20-22, 14-21 ನೇರ ಸೆಟ್ ಗಳ ಸೋಲು ಅನುಭವಿಸಿದರು.
ಕಂಚಿನ ಪದಕಕ್ಕಾಗಿ ಲಕ್ಷ್ಯ ಸೇನ್ ಸೋಮವಾರ ಸಂಜೆ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸಲಿದ್ದಾರೆ. ಪದಕ ಗೆದ್ದರೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ದಾಖಲೆ ಬರೆಯಲಿದ್ದಾರೆ.
ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಿ.ವಿ ಸಿಂಧು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಲಂಡನ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಭಾರತ ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಇದುವರೆಗೆ ಗೆದ್ದಿಲ್ಲ.
ಬಾಕ್ಸಿಂಗ್ ಅಭಿಯಾನ ಅಂತ್ಯ; ನಿರೀಕ್ಷೆ ಮೂಡಿಸಿದ್ದ ಲೊವ್ಲಿನಾಗೆ ಸೋಲು
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಭಾನುವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಕಠಿನ ಹೋರಾಟದಲ್ಲಿ ಸೋಲು ಅನುಭವಿಸಿದರು.
ಲೊವ್ಲಿನಾ ಗೊಂದಲಮಯವಾಗಿದ್ದ ಸ್ಪರ್ಧೆಯಲ್ಲಿ 1-4 ರಿಂದ ಸೋಲು ಅನುಭವಿಸಿದರು. ಶನಿವಾರ ರಾತ್ರಿ ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ನಲ್ಲಿ ನಿಶಾಂತ್ ದೇವ್ ಅವರು ಹೊರ ಬಿದ್ದ ನಂತರ ಲೊವ್ಲಿನಾ ಅವರ ಸೋಲು ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನವನ್ನು ಕೊನೆಗೊಳಿಸಿದೆ.