ಅಪರಾಧ ಸುದ್ದಿ

ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡಗೆ ಮತ್ತೆ ನಿರಾಸೆ; ಜಾಮೀನು ಅರ್ಜಿ ತಿರಸ್ಕಾರ

Share It

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ A-1 ಆರೋಪಿ ಆಗಿರುವ ಪವಿತ್ರಾ ಗೌಡ ಅವರಿಗೆ ಜಾಮೀನು ಪಡೆಯುವ ಪ್ರಯತ್ನದಲ್ಲಿ ಮತ್ತೊಮ್ಮೆ ಹಿನ್ನಡೆ ಎದುರಾಗಿದೆ. ಮಗಳ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ 25 ದಿನಗಳ ತಾತ್ಕಾಲಿಕ ಜಾಮೀನು ನೀಡುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದಕ್ಕೂ ಮೊದಲು ತಮ್ಮ ವಯೋವೃದ್ಧ ತಾಯಿಯ ಆರೋಗ್ಯದ ಕಾರಣವನ್ನು ಮುಂದಿಟ್ಟು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ, ಅದಕ್ಕೂ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಹೀಗಾಗಿ ಇತ್ತೀಚೆಗೆ ಮಗಳ ಬೋರ್ಡಿಂಗ್ ಪರೀಕ್ಷೆಗಳ ಸಂದರ್ಭ ತಾಯಿಯಾಗಿ ತನ್ನ ಉಪಸ್ಥಿತಿ ಅಗತ್ಯವಿದೆ ಎಂದು ತಿಳಿಸಿ ಮತ್ತೊಮ್ಮೆ ಮನವಿ ಮಾಡಿದ್ದರು. ಆದರೆ 57ನೇ ಸಿಸಿಎಚ್ ನ್ಯಾಯಾಲಯ ಈ ಮನವಿಯನ್ನು ಪರಿಗಣಿಸದೇ ತಿರಸ್ಕರಿಸಿದೆ.

ಈ ಪ್ರಕರಣದಲ್ಲಿ A-2 ಆರೋಪಿ ಆಗಿರುವ ನಟ ದರ್ಶನ್ ಅವರ ಜಾಮೀನು ಸುಪ್ರೀಂ ಕೋರ್ಟ್‌ನಲ್ಲಿ ರದ್ದು ಆದ ಬಳಿಕ ಅವರು ಮತ್ತೊಮ್ಮೆ ಜಾಮೀನು ಕೋರಿ ಮುಂದಾಗಿಲ್ಲ ಎಂಬ ಮಾಹಿತಿ ಇದೆ. ಆದರೆ ಪವಿತ್ರಾ ಗೌಡ ಮಾತ್ರ ಜಾಮೀನು ರದ್ದಾದ ನಂತರ ಎರಡು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ ಎರಡೂ ಸಲವೂ ಅವರಿಗೆ ನಿರಾಸೆಯೇ ಎದುರಾಗಿದೆ.

ಪವಿತ್ರಾ ಪರ ವಕೀಲರು ವಾದಿಸುತ್ತಾ, ಈ ಪ್ರಕರಣದಲ್ಲಿ ಅವರ ಪಾತ್ರ ನೇರವಾಗಿ ಮಾರಣಾಂತಿಕ ಹಲ್ಲೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅಶ್ಲೀಲ ಸಂದೇಶ ಕಳುಹಿಸಿದ್ದ ವ್ಯಕ್ತಿಗೆ ಕೋಪದಿಂದ ಒಂದು ಹೊಡೆತ ನೀಡಿದಷ್ಟೇ ಹೊರತು, ಸಾವಿಗೆ ಕಾರಣವಾದ ಹಲ್ಲೆಯಲ್ಲಿ ಅವರು ಭಾಗಿಯಾಗಿಲ್ಲ ಎಂದು ವಾದಿಸಿದ್ದಾರೆ. ಈ ಆಧಾರದ ಮೇಲೆ ಜಾಮೀನು ನೀಡಬೇಕು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಆದರೆ ಪ್ರಾಸಿಕ್ಯೂಷನ್ ವಾದ ಪ್ರಕಾರ, ಈ ಘಟನೆಯ ಆರಂಭಿಕ ಕಾರಣ ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ನಡುವಿನ ವಿವಾದವಾಗಿದ್ದು, ಅದರಿಂದ ಮುಂದಿನ ಬೆಳವಣಿಗೆಗಳು ನಡೆದಿವೆ. ಪವಿತ್ರಾ ಮತ್ತು ದರ್ಶನ್ ನಡುವಿನ ಆತ್ಮೀಯ ಸಂಬಂಧದ ಹಿನ್ನೆಲೆ ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿರುವುದಾಗಿ ತನಿಖೆ ತಿಳಿಸಿದೆ. ಈ ಕಾರಣಕ್ಕಾಗಿಯೇ ಪವಿತ್ರಾ ಅವರನ್ನು A-1 ಆರೋಪಿಯಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಲು ಸಮ್ಮತಿಸಿಲ್ಲ. ಹೀಗಾಗಿ ಪವಿತ್ರಾ ಗೌಡ ಅವರ ಜಾಮೀನು ಪ್ರಯತ್ನಗಳು ಮತ್ತೆ ವಿಫಲವಾಗಿದ್ದು, ಮುಂದಿನ ಕಾನೂನು ಹಂತಗಳತ್ತ ಅವರ ಗಮನ ಹರಿಯಲಿದೆ.


Share It

You cannot copy content of this page