ಬೆಂಗಳೂರು: ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಪವಿತ್ರಾ ಗೌಡ ಅವರು ಈಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ1 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಇಷ್ಟು ದಿನ ದರ್ಶನ್ ಸ್ನೇಹಿತೆಯಾಗಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಪವಿತ್ರಾ ಗೌಡಗೆ ಜೈಲಿನ ವಾತಾವರಣ ನರಕದಂತೆ ಆಗಿದೆ. ಸರಿಯಾಗಿ ಊಟ ಸೇರದೇ, ನಿದ್ರೆ ಬಾರದೇ ಪವಿತ್ರಾ ಅವರು ಜೈಲಿನಲ್ಲಿ ಒದ್ದಾಡುತ್ತಿದ್ದಾರೆ. ಮಂಕಾಗಿ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎ2 ಆಗಿರುವ ದರ್ಶನ್ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಣ ಮಾಡಿಕೊಂಡು ಬಂದು, ಪಟ್ಟಣಗೆರೆ ಶೆಡ್ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್, ಪವಿತ್ರಾ ಗೌಡ ಹಾಗೂ ಸಹಚರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೊರಗಡೆ ಇದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದ ಇವರಿಗೆ ಜೈಲಿನಲ್ಲಿ ದಿನ ಕಳೆಯುವುದು ಕಷ್ಟವಾಗಿದೆ.
ಸಹಕೈದಿಗಳ ಜೊತೆ ಪವಿತ್ರಾ ಗೌಡ ಬೆರೆಯುತ್ತಿಲ್ಲ. ಅಲ್ಲದೇ ಅವರು ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಇಂದು (ಜೂನ್ 24) ಬೆಳಗ್ಗೆ ಬೇಗ ಎದ್ದ ಅವರು ಕಾಫಿ ಕುಡಿದು, ಪೇಪರ್ ಓದಿದ್ದಾರೆ. ನಿನ್ನೆ ರಾತ್ರಿ ಜೈಲಿನ ಸಿಬ್ಬಂದಿ ನೀಡಿದ್ದ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆ ಊಟವನ್ನು ಅವರು ಒಲ್ಲದ ಮನಸ್ಸಿನಿಂದ ಸೇವಿಸಿದ್ದಾರೆ ಎನ್ನಲಾಗಿದೆ.
ಸರಿಯಾಗಿ ಉಪ್ಪು, ಖಾರ ಇಲ್ಲದ ಜೈಲಿನ ಊಟ ಸೇವಿಸುವುದು ಪವಿತ್ರಾ ಗೌಡ ಅವರಿಗೆ ಅನಿವಾರ್ಯವಾಗಿದೆ. ಅಷ್ಟೇ ಅಲ್ಲದೇ, ಚಾಪೆಯಲ್ಲಿ ಮಲಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಸೊಳ್ಳೆ ಕಾಟ ಕೂಡ ಇರುವುದರಿಂದ ಪವಿತ್ರಾ ಇನ್ನಷ್ಟು ಹೈರಾಣಾಗಿದ್ದಾರೆ. ರಾತ್ರಿ ಬೇಗ ಮಲಗಿದರೂ ಕೂಡ ಅವರು ಪದೇ ಪದೇ ಸೊಳ್ಳೆ ಕಾಟದಿಂದ ಎಚ್ಚರಕೊಳ್ಳುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿ ಆಗಿದೆ. ಸ್ಟಾರ್ ನಟ ದರ್ಶನ್ ಮೇಲೆ ಕೊಲೆ ಆರೋಪ ಬಂದಿರುವುದರಿಂದ ಎಲ್ಲರ ಕಣ್ಣು ಈ ಕೇಸ್ನ ಮೇಲಿದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಅನೇಕ ಸೆಲೆಬ್ರಿಟಿಗಳು ಕೂಡ ಒತ್ತಾಯಿಸಿದ್ದಾರೆ. ದರ್ಶನ್ ಮೇಲೆ ಗಂಭೀರ ಆರೋಪ ಎದುರಾದ ಕಾರಣ ಅವರ ಆಪ್ತರಿಗೆ ಬೇಸರ ಆಗಿದೆ. ಜೊತೆಗೆ ಅವರನ್ನೇ ನಂಬಿ ‘ಡೆವಿಲ್’ ಸೇರಿದಂತೆ ಅನೇಕ ತೆರೆ ಕಾಣದ ಕನ್ನಡ ಚಿತ್ರಗಳ ನಿರ್ಮಾಪಕರು ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಲು ಉದ್ದೇಶಿಸಿರುವ ನಮ್ಮ ಸಿನಿಮಾಗಳ ಗತಿ ಏನು? ಎಂದು ಅಳುತ್ತಿದ್ದಾರೆ.

