ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿನ ಶೌಚಾಲಯ ನಿರ್ವಹಣೆ ಕುರಿತು ಅನೇಕ ದೂರುಗಳು ಬಂದಿದ್ದು, ಇದನ್ನು ಸ್ವತಃ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.
ಈ ಕುರಿತು ಎಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಪತ್ರ ಬರೆದಿರುವ ರಾಮಲಿಂಗಾ ರೆಡ್ಡಿ ಅವರು, ಸಾರ್ವಜನಿಕರ ಹಿತದೃಷ್ಟಿ ಹಾಗೂ ಸಂಸ್ಥೆಯ ಗೌರವದ ಭಾಗವಾಗಿ ಬಸ್ ನಿಲ್ದಾಣಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ, ಶೌಚಾಲಯಗಳ ಸ್ಥಿತಿಗತಿಯ ಬಗ್ಗೆ, ನಿರ್ವಹಣೆಯ ಬಗ್ಗೆ ವರದಿ ನೀಡಬೇಕು ಎಂದು ಆದೇಶಿಸಿದ್ದಾರೆ.
ಈ ಕುರಿತು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಬಸ್ ಸ್ಟಾಂಡ್‌ಗಳಿಗೂ ಭೇಟಿ ನೀಡಿರುವ ಕುರಿತು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಅನೇಕ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ವಹಣೆ ಸರಿಯಾಗಿಲ್ಲ ಎಂಬ ದೂರುಗಳು ಸಚಿವರ ಕಚೇರಿಗೆ ಬಂದ ಹಿನ್ನೆಲೆಯಲ್ಲಿ ಹಾಗೂ ಉಪಲೋಕಾಯುಕ್ತರು ಈ ಕುರಿತು ಸಚಿವರ ಕಚೇರಿಗೆ ನೀಡಿದ ಮಾಹಿತಿಯ ಆಧಾರದಲ್ಲಿ ಸಚಿವರು, ಇಂತಹದ್ದೊAದು ಆದೇಶವನ್ನು ಮಾಡಿದ್ದಾರೆ.

