ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಜೆಡಿಎಸ್‌ನ ಮೈತ್ರಿ ಪಕ್ಷ ಬಿಜೆಪಿ ನಾಯಕನಿಗೂ ಬಂಧನದ ಭೀತಿ ಎದುರಾಗಿದ್ದು, ಇದೀಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಹಾಸನ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧದ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದ್ದು, ಬಂಧಿಸದಂತೆ ನಿರ್ಬಂಧ ವಿಧಿಸಿದೆ. ಪ್ರಕರಣ ರದ್ದುಕೋರಿ ಪ್ರೀತಂಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ.
ಪ್ರಕರಣ ಅತ್ಯಂತ ಗಂಭೀರ ಮತ್ತು ಸೂಕ್ಷ್ಮದ್ದಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕಾಗಿದೆ. ಆದ್ದರಿಂದ ತನಿಖೆಗೆ ಯಾವುದೇ ತಡೆ ನೀಡಲಾಗುವುದಿಲ್ಲ. ಆದರೆ, ವಿಚಾರಣೆಗೆ ಮುಂದುವರೆಯಬಹುದಾಗಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಪೆನ್‌ಡ್ರೈವ್ ಹಂಚಿಕೆ ಆರೋಪ ಸಂಬಂಧ ಸಂತ್ರಸ್ತೆಯೊಬ್ಬರು ಸಿಐಡಿ ಸೈಬರ್ ಠಾಣೆಯಲ್ಲಿ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್‌ನಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕಿರಣ್ ಮತ್ತು ಶರತ್ ಎಂಬುವರ ವಿರುದ್ಧವೂ ದೂರು ದಾಖಲಾಗಿದೆ.
ಈಗಾಗಲೇ ಪೆನ್ ಡ್ರೈವ್ ನಲ್ಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿ, ಜೈಲಿನಲ್ಲಿಟ್ಟಿದೆ. ಆ ಪೆನ್ ಡ್ರೈವ್ ಹಂಚಿದ ಆರೋಪದಲ್ಲಿ ಪ್ರೀತಂ ಗೌಡಗೂ ತನಿಖೆಯ ಬಿಸಿ ಮುಟ್ಟಿದ್ದು, ಹೈಕೋರ್ಟ್ ಬಂಧನಕ್ಕೆ ತಡೆ ನೀಡಿರುವುದು ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.