ಬೆಂಗಳೂರು: ಸಚಿವರು, ಶಾಸಕರ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.
ನನ್ನದು ಸೇರಿ ವಿಪಕ್ಷ ನಾಯಕರು ಸೇರಿ ಸಚಿವರದ್ದೂ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ನಮಗೆ ಈ ಸಂಬಂಧ ಯಾವುದೇ ದೂರುಗಳು ಬಂದಿಲ್ಲ ಎಂದಿದ್ದಾರೆ.
ಪೋನ್ ಕದ್ದಾಲಿಕೆಯಾಗಿದೆ ಎಂಬ ಆರೋಪವನ್ನು ಬರೀ ರಾಜಕೀಯ ಕಾರಣಕ್ಕೆ ಮಾಡುತ್ತಿರಬಹುದು. ಒಂದು ವೇಳೆ ಕದ್ದಾಲಿಕೆಯಾಗಿದ್ದರೆ, ತನಿಖೆ ನಡೆಸಲು ಪೊಲೀಸ್ ಇಲಾಖೆ ಸಿದ್ಧವಿದೆ. ಆದರೆ, ಈವರೆಗೆ ಅಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ಗೃಹಸಚಿವರು ತಿಳಿಸಿದ್ದಾರೆ.