ಅಪರಾಧ ಸುದ್ದಿ

ಪ್ಲೆಕ್ಸ್ ತಲೆಯ ಮೇಲೆ ಬಿದ್ದು ಕೋಮಾಗೆ ಜಾರಿದ ವೃದ್ಧ

Share It

ಬೆಂಗಳೂರು: ಮುಂಬೈನಲ್ಲಿ ನಡೆದ ಪ್ಲೆಕ್ಸ್ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ಮರೆಯಾಗುವ ಮುನ್ನವೇ ಬೆಂಗಳೂರಿನಲ್ಲಿ ಪ್ಲೆಕ್ಸ್ವೊಂದು ವಯೋವೃದ್ಧರೊಬ್ಬರ ತಲೆಯ ಮೇಲೆ ಬಿದ್ದು, ಕೋಮಾಗೆ ಜಾರಿರುವ ಘಟನೆ ನಡೆದಿದೆ.

ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ಬಳಿ ಅಳವಡಿಸಿದ್ದ ಜಾಹೀರಾತು ಫಲಕವೊಂದು ಮುರಿದುಬಿದ್ದು, ರಾಜಾನುಕುಂಟೆ ನಿವಾಸಿ ಭಕ್ತವತ್ಸಲಂ ಎಂಬ 70 ವರ್ಷದ ವೃದ್ಧರು ಕೋಮಾಗೆ ಜಾರಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ರಾಜಾನುಕುಂಟೆಯ ನಿವಾಸಿಯಾದ ಭಕ್ತವತ್ಸಲಂ ಅವರು, ತಮ್ಮ ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಜಾಹೀರಾತು ಫಲಕ ಮುರಿದು ಅವರ ತಲೆಯ ಮೇಲೆ ಬಿದ್ದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾರೆ ಎನ್ನಲಾಗಿದೆ.

ಶಾಸಕ ವಿಶ್ವನಾಥ್ ಹುಟ್ಟುಹಬ್ಬದ ಫ್ಲೆಕ್ಸ್: ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಸಿಂಗನಾಯಕನಹಳ್ಳಿ ಸೇರಿದಂತೆ ಯಲಹಂಕ ಭಾಗದ ಬಹುತೇಕ ಕಡೆ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಈ ಜಾಹೀರಾತು ಫಲಕಗಳ ಪೈಕಿ ಒಂದು ವೃದ್ಧರ ಮೇಲೆ ಬಿದ್ದು ಅವಾಂತರವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲ: ಫ್ಲೆಕ್ಸ್ ಬಿದ್ದ ಘಟನೆ ನಡೆದಿರುವುದು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ನಿಯಮ ಉಲ್ಲಂಘನೆಯಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತ ಫ್ಲೆಕ್ಸ್/ಬ್ಯಾನರ್ ಗಳನ್ನು ತೆರವುಗಿಳಿಸುತ್ತಿದ್ದು, ಅಳವಡಿಸುವವರ ಮೇಲೆ ಎಫ್.ಐ.ಆರ್ ದಾಖಲಿಸಲಾಗುತ್ತಿದೆ. ಅಪಘಾತ ನಡೆದ ಸ್ಥಳ ಯಲಹಂಕ ತಾಲೂಕಿನ ಸಿಂಗನಾಯಕನ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರಲಿದ್ದು, ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.


Share It

You cannot copy content of this page