ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ರನ್ನು ಬಸವೇಶ್ವರ ನಗರ ಪೊಲೀಸರು ಮತ್ತೇ ವಶಕ್ಕೆ ಪಡೆದಿದ್ದಾರೆ.
ನೆನ್ನೆ ಈ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಶೇಷ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅವರು ಬಳಸಿದ್ದ ಲಾಂಗ್ ಫೈಬರ್‌ದು ಎಂಬ ಕಾರಣ ನೀಡಿ ಜಾಮೀನು ನೀಡಲಾಗಿತ್ತು. ಆದರೆ, ಇಂದು ಮತ್ತೇ ವಿಚಾರಣೆಗೆ ಹಾಜರಾಗಿದ್ದ ವೇಳೆ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾರೆ.
ರಿಯಾಲಿಟಿ ಶೋ ವೊಂದರ ಶೂಟಿಂಗ್ ನಂತರ ಲಾಂಗ್ ಹಿಡಿದು ಈ ಇಬ್ಬರು ನಟರು ರೀಲ್ಸ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮಾರಕಾಸ್ತç ಬಳಕೆ ಕಾನೂನಿಗೆ ವಿರುದ್ಧವಾಗಿದ್ದು, ಅವರನ್ನು ನೆನ್ನೆಯೇ ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ನಂತರ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಆದರೆ, ರಾತ್ರಿ ಪೊಲೀಸರು ಏಕಾಏಕಿ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಆದರೆ, ಇಂದು ವಿಚಾರಣೆಗೆ ಮತ್ತೇ ಹಾಜರಾಗುವಂತೆ ತಾಕೀತು ಮಾಡಿದ್ದರು. ಇಂದು ಅವರು ಬಳಸಿದ್ದ ಲಾಂಗ್ ಕಬ್ಬಿಣದ್ದಲ್ಲ ಎಂಬ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಪೊಲೀಸರ ಮೇಲೆಯೇ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾದ ಇಬ್ಬರು ನಟರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಇಬ್ಬರು ನಟರನ್ನು ತಮ್ಮದೇ ವಾಹನದಲ್ಲಿ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಶೂಟಿಂಗ್ ನಡೆದಿದ್ದ ಕಾರಣಕ್ಕೆ ಅಲ್ಲಿಗೆ ನಟರನ್ನು ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.