ರಾಜಕೀಯ ಸುದ್ದಿ

ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಆರಂಭವಾಗಿದೆ:ಬಸವರಾಜ ಬೊಮ್ಮಾಯಿ

Share It

ಗದಗ: ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಆರಂಭವಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಅವರು ಗದಗನಲ್ಲಿಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈ ಚುನಾವಣೆ ಮುಂದಿನ ಜನಾಂಗಕ್ಕೆ ನಡೆಯುತ್ತಿದೆ. ಮೋದಿಯವರು ಮುತ್ಸದ್ದಿ ನಾಯಕರು. ಅವರು ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾರೆ. ಹಿಂದಿನ ರಾಜಕಾರಣಿಗಳು ಯುವಕರು, ಬಡವರ ಬಗ್ಗೆ ಯೋಚನೆ ಮಾಡಲಿಲ್ಲ. ಕೇವಲ ಕೆಲವು ಜನರ ಓಲೈಕೆಗೆ ತುಷ್ಡೀಕರಣ ರಾಜಕಾರಣ ಮಾಡಿ ತಮ್ಮ ರಾಜಕಾರಣ ಮುಂದೆ ಮಾಡಿಕೊಂಡು ದೇಶವನ್ನು ಹಿಂದೆ ತಳ್ಳಿದ್ದಾರೆ ಎಂದರು.

ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರ ಎಚ್ ಸಿ ಮಹದೇವಪ್ಪ ಸಂವಿಧಾನದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಕಾಂಗ್ರೆಸ್ ನವರು 1975 ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ‌ ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದರು. ಎಷ್ಟೋ ಜನರ ಕಗ್ಗೊಲೆಯಾಯಿತು. ಆರ್ಟಿಕಲ್ 42 ಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ, ಸಂವಿಧಾನಕ್ಕೆ ಮರ್ಯಾದೆ ಕೊಡದವರು ಕಾಂಗ್ರೆಸ್ ನವರು ಈಗ ಸಂವಿಧಾನ ಬದಲಾಯಿಸುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿಯವರು ಪ್ರಧಾನಿಯಾಗಿ ಸಂಸತ್ತು ನನಗೆ ದೇಗುಲ ಇದ್ದಹಾಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ ಎಂದು ಹೇಳಿದರು. ಯಾವುದೇ ಪಕ್ಷ ಎಷ್ಟೇ ಬಹುಮತ ಪಡೆದರೂ ಸಂವಿಧಾನದ ಮೂಲ ತತ್ವ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ 400 ಕ್ಕೂ ಹೆಚ್ಚು ಸ್ಥಾನ ಪಡೆದಿತ್ತು. ಶಾಭಾನು ಪ್ರಕರಣದಲ್ಲಿ ಗಂಡನಿಂದ ವಿಚ್ಚೇದನ ಹೊಂದಿದ ಅವಳಿಗೆ ಜೀವನಾಂಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ತಪ್ಪಿಸಲು ಅಧಿಕಾರ ದುರುಪಯೋಗ ಪಡೆಸಿಕೊಂಡು ಸಂವಿಧಾನ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು.

ಭಾರತದಲ್ಲಿ ಬಡತನ ಈಗಲೂ ಇರಲು ಕಾರಣ ಕಾಂಗ್ರೆಸ್. 1972 ರಲ್ಲಿ ಕಾಂಗ್ರೆಸ್ ಗರೀಬಿ ಹಠಾವೊ ಘೋಷಣೆ ಮಾಡಿದ್ದಾರೆ. ಆದರೂ, ಇನ್ನೂ ಬಡತನ ಇದೆ ಅಂದರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದರು.


Share It

You cannot copy content of this page