ಪುಣೆ: ಪುಣೆಯ ಐಷರಾಮಿ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಗನ ರಕ್ತದ ಮಾದರಿ ಬದಲಾಯಿಸಲು ತಾಯಿಯೇ ರಕ್ತ ನೀಡಿದ್ದರು ಎಂಬ ಆರೋಪದಡಿ ಆರೋಪಿ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಐಷರಾಮಿ ಕಾರು ಅಪಘಾತ ನಡೆಸಿ ಇಬ್ಬರು ಅಮಾಯರ ಸಾವಿಗೆ ಉದ್ಯಮಿಯೊಬ್ಬರ 17 ವರ್ಷದ ಮಗ ಕಾರಣವಾಗಿದ್ದ. ಆತನನ್ನು ಪ್ರಕರಣದಿಂದ ಉಳಿಸಲು ವ್ಯವಸ್ಥಿತ ಸಂಚೇ ನಡೆದಿತ್ತು. ಆದರೆ, ಮಾಧ್ಯಮಗಳಲ್ಲಿ ಒಂದೊಂದಾಗಿ ಸಾಕ್ಷಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತಿದ್ದಂತೆ ಪೊಲೀಸರು ಎಚ್ಚೆತ್ತು ಪ್ರಕರಣವನ್ನು ಭೇದಿಸುತ್ತಾ ಹೋಗುತ್ತಿದ್ದಾರೆ. ಹೀಗಾಗಿ, ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಾ ಸಾಗುತ್ತಿದೆ.
ಆಲ್ಕೋಹಾಲ್ ಸೇವನೆ ಆರೋಪವಿದ್ದ ಕಾರಣದಿಂದ ಆತನ ರಕ್ತ ಪರೀಕ್ಷೆಗೆ ಪಡೆದಿದ್ದ ಸ್ಯಾಂಪಲ್ ಅನ್ನು ಡಸ್ಟ್ಬಿನ್ ಗೆ ಹಾಕಲಾಗಿತ್ತು ಎಂಬ ಆರೋಪದಡಿ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದರು. ಆತನ ಸ್ಯಾಂಪಲ್ ಬಿಸಾಕಿ ಬೇರೊಬ್ಬರ ರಕ್ತ ಮಾದರಿ ಪಡೆದು ಪರೀಕ್ಷೆ ನಡೆಸಿ, ಆತ ಆಲ್ಕೋಹಾಲ್ ಸೇವನೆ ಮಾಡಿರಲಿಲ್ಲ ಎಂದು ವರದಿ ನೀಡಿದ್ದರು. ಈಗ ಆ ಸ್ಯಾಂಪಲ್ ನೀಡಿದ್ದು ಬೇರಾರು ಅಲ್ಲ ಆರೋಪಿಯ ತಾಯಿಯೇ ಎಂದು ಗೊತ್ತಾಗಿದೆ.
ಆತನ ರಕ್ತದ ಮಾದರಿಯನ್ನೇ ಹೋಲುವ ಅದೇ ಗ್ರೂಪ್ ರಕ್ತ ಬೇಕು ಎಂಬ ಅಂಶವನ್ನು ಡಾಕ್ಟರ್ ಹೇಳುತ್ತಿದ್ದಂತೆ ಆಕೆಯ ತಾಯಿಯೇ ತನ್ನ ರಕ್ತದ ಮಾದರಿಯನ್ನು ಕೊಟ್ಟು, ಹಾಲ್ಕೋಹಾಲ್ ಸೇವನೆ ವಿಚಾರದಲ್ಲಿ ನೆಗೆಟೀವ್ ವರದಿ ಬರುವಂತೆ ಮಾಡಿದ್ದರು ಎನ್ನಲಾಗಿದೆ. ಈ ಆರೋಪದಡಿ ಆಕೆಯನ್ನು ಪುಣೆ ಪೊಲೀಸರು ಬಂಧನ ಮಾಡಿದ್ದು, ಇದೀಗ ಇಡೀ ಕುಟುಂಬವೇ ಪೊಲೀಸರ ಬಂಧನಕ್ಕೊಳಪಟ್ಟಂತಾಗಿದೆ.
ಅಪ್ರಾಪ್ತನಿಗೆ ಕಾರು ನೀಡಿ ಅಪಘಾತಕ್ಕೆ ಕಾರಣವಾದ ಕಾರಣಕ್ಕೆ ಬಾಲ ಆರೋಪಿಯ ತಂದೆ, ಖ್ಯಾತ ಉದ್ಯಮಿಯನ್ನು ಪೊಲೀಸರು ಪ್ರಕರಣದಲ್ಲಿ ಆರೋಪಿಯನ್ನಾಗಿಸಿದ್ದರು. ನಂತರ ಪ್ರಕರಣದಲ್ಲಿ ಅಪಘಾತ ಮಾಡಿದ್ದು ನಾನೇ ಎಂದು ಒಪ್ಪಿಕೊಳ್ಳುವಂತೆ ಅವರ ಮನೆಯ ಚಾಲಕನೊಬ್ಬನಿಗೆ ಟಾರ್ಚರ್ ನೀಡಲಾಗಿತ್ತು. ಆ ರೋಪದಡಿ ಆರೋಪಿಯ ತಾತನನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ತಾಯಿ ಕೂಡ ತನ್ನ ಮಗನನ್ನು ಉಳಿಸಿಕೊಳ್ಳಲು ಅಪಘಾತದ ಭಾಗವಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಒಟ್ಟಾರೆ, ತಮ್ಮ ಮಗ ಮಾಡಿದ ತಪ್ಪನ್ನು ಮುಚ್ಚಿ ಹಾಕಲು ಇಡೀ ಕುಟುಂಬ ಏನೆಲ್ಲ ವ್ಯವಸ್ಥಿತ ಸಂಚು ರೂಪಿಸಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಸಾಕ್ಷ್ಯ ನಾಶದ ಆರೋಪದಡಿ ತಾಯಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಶೀಮಂತಿಕೆ ಮದದಿಂದ ಮಗನ ತಪ್ಪನ್ನು ಮುಚ್ಚುಹಾಕಲು ಹೋದ ಇಡೀ ಕುಟುಂಬ ಜೈಲು ಪಾಲಾಗಿದೆ.

