ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಗ್ ಬಾಸ್ ಖ್ಯಾತಿಯ, ನಟ ಪ್ರಥಮ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದು ಅಂಧಾಭಿಮಾನಿಗಳಿಂದ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿಮ ಉಲ್ಲೇಖಿಸಿದ್ದಾರೆ.
ದೂರು ನೀಡಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಟ ಪ್ರಥಮ್, ಜೀವನ ಬಹಳ ದೊಡ್ಡದು;ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ.
ನೀವು ಅತಿಯಾಗಿ ನಮ್ಮ ʼಕರ್ನಾಟಕದ ಆಳಿಯʼ ತಂಡದ ಆಫೀಸ್ ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಾ. ಇನ್ಮೇಲೆ ನನಗೆ ಬರುವ ಕಾಲ್ ಮೆಸೇಜ್ ಅಥವಾ ಸೋಶಿಯಲ್ ಮೀಡಿಯಾ ವಾರ್ನಿಂಗ್ ಎಲ್ಲವೂ ಪೋಲೀಸರು ನೋಡಿಕೊಳ್ಳುತ್ತಾರೆ.
ಬದುಕು ಸುಂದರವಾದದ್ದು. ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ; ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ ಕನ್ನಡಕ್ಕಾಗಿ, ಕಾವೇರಿಗಾಗಿ,ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ ಯಾರಿಗೋಸ್ಕರವೋ ಲೈಫ್ ಹಾಳುಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ಸಂಬಂಧ ಪ್ರಥಮ್ ಮಾತನಾಡಿದ್ದರು. ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಕೆಲಸ ಕೊಡಿ ಠಾಣೆ ಎದುರು ಜಮಾಯಿಸುವವರನ್ನ ಲಾಠಿಯಿಂದ ಹೊಡೆದು ಓಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಈ ವಿಡಿಯೋ ವೈರಲ್ ಆಗಿತ್ತು. ಇದು ದರ್ಶನ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಇದೇ ಕಾರಣದಿಂದ ಕೆಲ ದರ್ಶನ್ ಅಭಿಮಾನಿಗಳ ಪ್ರಥಮ್ ಗೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.

