ಅಂಕಣ ರಾಜಕೀಯ ಸುದ್ದಿ

ಪ್ರಧಾನಿ ಮೋದಿ ಮತ್ತು ಯಕ್ಷಣಿಕಥೆ !

Share It

“ನನ್ನನ್ನು ದೇವರು ಕಳಿಸಿದ್ದಾನೆ. ನನಗೆ ಜೈವಿಕ ತಂದೆ ತಾಯಿ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತು ಕೇಳಿದಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ಮರಾಠಿ ಸಾಹಿತಿ ವಿ.ಸ. ಖಾಂಡೇಕರ್ ಅವರ ‘ ಕುಬೇರ ನಗರ ‘ ಸೊಗಸಾದ ರೂಪಕ ಕಥೆ ನೆನಪಾಗುತ್ತದೆ . (ಸಾಹಿತಿ ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಅನುವಾದಿಸಿದ್ದಾರೆ )

ಕಥೆಯ ಸಂಕ್ಷಿಪ್ತ ರೂಪ ಎಷ್ಟು :
ದೊಡ್ಡ ಸಮೂಹ ಅರಣ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಶರೀರವಾಣಿಯೊಂದು ಕೇಳಿಸುತ್ತದೆ. “ಮಹಾಜನಗಳೇ,ಕಣ್ಣಿಗೆ ಬಿಗಿಯಾಗಿ ಬಟ್ಟೆ ಕಟ್ಟಿಕೊಂಡು ನಡೆದು ಹೋಗಿ. ಕಾಡು ಮುಗಿಯುತ್ತಲೇ ನಿಮಗೆ ‘ಕುಬೇರ ಲೋಕ’ ದೊರೆಯುತ್ತದೆ. ಯಕ್ಷಣಿಯರು ಬಂದು ಅಮೃತ ನೀಡುತ್ತಾರೆ. ಯಾರು ನನ್ನ ಮೇಲೆ ಶ್ರದ್ಧೆ ಇಡುವುದಿಲ್ಲವೋ ಅವರನ್ನು ನೋ -ಡಿ -ಕೊ-ಳ್ಳು-ವೆ “ಎಂದು ಹೇಳುತ್ತದೆ.

ಎಲ್ಲರೂ ತಮ್ಮ ಅಂಗಿ ಹರಿದು ಕಣ್ಣುಕಟ್ಟಿಕೊಳ್ಳುತ್ತಾರೆ. ಆದರೆ ಅವರಲ್ಲಿಯ ಐದು ಜನ ಕಣ್ಣು ಕಟ್ಟಿಕೊಳ್ಳುವುದಿಲ್ಲ. ಸಂಜೆ ಎಲ್ಲರೂ ಅರಣ್ಯ ದಾಟಿ ಹೊರಗೆ ಬರುತ್ತಾರೆ. ಇನ್ನೇನು ಕುಬೇರ ನಗರ ದೊರೆಯುತ್ತದೆ ಎಂಬ ಆಸೆಯಿಂದ ಕಾಯತೊಡಗುತ್ತಾರೆ. ಮತ್ತೆ ಶರೀರವಾಣಿಯಾಗುತ್ತದೆ. “ಯಾರು ಕಣ್ಣು ಕಟ್ಟಿಕೊಂಡಿಲ್ಲವೋ ಅವರು ಪ್ರತ್ಯೇಕವಾಗಿ ನಿಲ್ಲಿ “ಎಂದು ಶರೀರವಾಣಿ ಹೇಳುತ್ತದೆ.

ಅವರಿಗೆ ಯಾವ ಶಿಕ್ಷೆ ಕಾದಿದೆಯೋ ಎಂದು ಎಲ್ಲರೂ ಕಾತುರದಿಂದ ನೋಡುತ್ತಾರೆ. “ನನ್ನ ಆಜ್ಞೆ ಮೀರಿದ್ದು ಯಾಕೆ “? ಅಶರೀರವಾಣಿ ಪ್ರಶ್ನಿಸುತ್ತದೆ. ಅವರು ಒಂದೇ ಧ್ವನಿಯಲ್ಲಿ ಉತ್ತರಿಸುತ್ತಾರೆ. “ಓ ಮಹಾಶಕ್ತಿಯೇ ಯಾವ ಶಕ್ತಿ ನಿನ್ನನ್ನು ನಿರ್ಮಿಸಿದೆಯೋ,ಅದೇ ಶಕ್ತಿ ನಮ್ಮನ್ನು ನಿರ್ಮಿಸಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡೆಯುವುದು ಅಪಮಾನ. ನಾವು ಅರಣ್ಯ, ಗಿಡ ಮರ, ಹೂ, ಬಂಡೆ ಗಲ್ಲು, ಪ್ರಾಣಿ ಪಕ್ಷಿ ನೋಡಿ ತುಂಬಾ ಸಂತೋಷಪಟ್ಟಿದ್ದೇವೆ. ನಮಗೆ ಕುಬೇರ ನಗರ ಬೇಡ” ಎಂದು ಹೇಳುತ್ತಾರೆ.

” ಐದು ಜನ ಹೇಳಿದ ಉತ್ತರ ಮೆಚ್ಚಿಕೊಂಡಿದ್ದೇನೆ . ಆದರೆ ಕಣ್ಣಿಗೆ ಬಟ್ಟೆ ಕೊಟ್ಟುಕೊಂಡವರೆಲ್ಲ ಇನ್ನೂ ನಡೆಯುತ್ತಲೇ ಇರಬೇಕಾಗುತ್ತದೆ” ಎಂದು ಆಶರೀರವಾಣಿ ಹೇಳಿ ಮರೆಯಾಗುತ್ತದೆ.

ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
9379090059


Share It

You cannot copy content of this page