ಗಿಗ್ ಕಾರ್ಮಿಕರ ಸುರಕ್ಷತೆಗೆ ಆದ್ಯತೆ: 10 ನಿಮಿಷ ವಿತರಣೆಗೆ ಬ್ಲಿಂಕಿಟ್ ಬ್ರೇಕ್
ಗಿಗ್ ಕಾರ್ಮಿಕರ ಕೆಲಸದ ಪರಿಸ್ಥಿತಿಗಳ ಸುಧಾರಣೆಗೆ ಆಗ್ರಹಿಸಿ ದೇಶವ್ಯಾಪಿ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರ ಮಧ್ಯಪ್ರವೇಶದ ನಂತರ ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ತನ್ನ 10 ನಿಮಿಷಗಳ ವಿತರಣಾ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ನವದೆಹಲಿ: ಗಿಗ್ ಕಾರ್ಮಿಕರ ಸುರಕ್ಷತೆ ಹಾಗೂ ಕೆಲಸದ ಒತ್ತಡದ ಬಗ್ಗೆ ಹೆಚ್ಚುತ್ತಿರುವ ಚರ್ಚೆಗಳ ನಡುವೆ, ಬ್ಲಿಂಕಿಟ್ ತನ್ನ ಅಲ್ಟ್ರಾ-ಫಾಸ್ಟ್ 10 ನಿಮಿಷ ವಿತರಣಾ ಮಾದರಿಯನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 31, 2025 ರಂದು ಉತ್ತಮ ಕೆಲಸದ ಪರಿಸ್ಥಿತಿಗಳು ಹಾಗೂ ಅತಿವೇಗದ ವಿತರಣಾ ಗುರಿಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಗಿಗ್ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಪ್ರಮುಖ ಕ್ವಿಕ್ ಕಾಮರ್ಸ್ ಕಂಪನಿಗಳೊಂದಿಗೆ ಚರ್ಚೆ ನಡೆಸಿತು.
ಈ ಮೊದಲು 10 ನಿಮಿಷಗಳ ವಿತರಣೆಯ ಕುರಿತು ಉಂಟಾಗಿದ್ದ ಆತಂಕಗಳನ್ನು ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ತಳ್ಳಿಹಾಕಿದ್ದರು. 10 ನಿಮಿಷಗಳ ಟೈಮರ್ ಗ್ರಾಹಕರಿಗೆ ಮಾತ್ರ ಎನ್ನಲಾಗಿದ್ದು, ವಿತರಣಾ ಪಾಲುದಾರರು ಆ ಗಡುವಿಗೆ ತಲುಪಲು ಆತುರಪಡಿಸುವುದಿಲ್ಲ ಎಂದು ಅವರು ಹೇಳಿದ್ದರು. ಆದರೂ ವಾಸ್ತವದಲ್ಲಿ ಈ ರೀತಿಯ ಅಲ್ಟ್ರಾ-ಫಾಸ್ಟ್ ವಿತರಣಾ ಭರವಸೆ ವಿತರಣಾ ಸವಾರರ ಮೇಲೆ ಪರೋಕ್ಷ ಒತ್ತಡ ಸೃಷ್ಟಿಸಿ, ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಗಿಗ್ ಕಾರ್ಮಿಕರ ಸುರಕ್ಷತೆಯ ವಿಚಾರ ಸಂಸತ್ತಿನಲ್ಲೂ ಹಲವು ಬಾರಿ ಪ್ರಸ್ತಾಪವಾಗಿತ್ತು. ವಿಶೇಷವಾಗಿ ಚಳಿಗಾಲದ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು, ಅತೀವೇಗದ ವಿತರಣಾ ಗುರಿಗಳು ವಿತರಣಾ ಪಾಲುದಾರರನ್ನು ಅಪಾಯಕರ ಪರಿಸ್ಥಿತಿಗೆ ತಳ್ಳುತ್ತವೆ ಎಂದು ಎಚ್ಚರಿಸಿದ್ದರು.
ಈ ವಿಷಯವನ್ನು ಟೈಮ್ಸ್ ನೌ ನಿರಂತರವಾಗಿ ಮುಂದಿಟ್ಟು, ಗಿಗ್ ಕಾರ್ಮಿಕರ ಆತಂಕಗಳು ಮತ್ತು ಅಲ್ಟ್ರಾ-ಫಾಸ್ಟ್ ವಿತರಣೆಯೊಂದಿಗೆ ಸಂಬಂಧಿಸಿದ ಸುರಕ್ಷತಾ ಅಪಾಯಗಳನ್ನು ಜನಸಾಮಾನ್ಯರ ಗಮನಕ್ಕೆ ತಂದಿತ್ತು. ಇದೇ ವೇಳೆ “10 ನಿಮಿಷಗಳ ವಿತರಣಾ ಗುರಿಗಳು ಕಾರ್ಮಿಕರ ಸುರಕ್ಷತೆಗೆ ಧಕ್ಕೆ ತರುತ್ತವೆಯೇ?” ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆಯನ್ನೂ ನಡೆಸಲಾಗಿತ್ತು. ಸಮೀಕ್ಷೆಗೆ ಭಾರಿ ಪ್ರತಿಕ್ರಿಯೆ ಲಭಿಸಿದ್ದು, ಹೆಚ್ಚಿನವರು ಈ ವ್ಯವಸ್ಥೆ ಅಪಾಯಕಾರಿಯೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಟೈಮ್ಸ್ ನೌ ಸಮೀಕ್ಷೆಯ ವಿವರಗಳು:
ಒಟ್ಟು ಮತಗಳು: 4163
ಹೌದು, ಗಮನಾರ್ಹವಾಗಿ: 2511 (60.3%)
ಕೆಲವೊಮ್ಮೆ: 815 (19.6%)
ವಿರಳವಾಗಿ: 251 (6.0%)
ಇಲ್ಲ: 586 (14.1%)
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು 80 ಶೇಕಡಾ ಮಂದಿ, 10 ನಿಮಿಷಗಳ ವಿತರಣಾ ಗುರಿಗಳು ಕನಿಷ್ಠ ಕೆಲವೊಮ್ಮೆ ಆದರೂ ಕಾರ್ಮಿಕರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತವೆ ಎಂದು ನಂಬಿರುವುದು ಸ್ಪಷ್ಟವಾಗಿದೆ.
ಈ ಹಿನ್ನೆಲೆ ಕಾರ್ಮಿಕ ಸಚಿವಾಲಯವು ಬ್ಲಿಂಕಿಟ್, ಜೆಪ್ಟೊ, ಜೊಮಾಟೊ ಮತ್ತು ಸ್ವಿಗ್ಗಿ ಸೇರಿ ಪ್ರಮುಖ ವೇದಿಕೆ ಗಳೊಂದಿಗೆ ಸಭೆ ನಡೆಸಿ, ವಿತರಣಾ ಸಮಯ ಗುರಿಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿತು. ಅದರ ಪರಿಣಾಮ ಬ್ಲಿಂಕಿಟ್ ಈಗಾಗಲೇ ತನ್ನ ಬ್ರ್ಯಾಂಡಿಂಗ್‌ನಿಂದ 10 ನಿಮಿಷಗಳ ವಿತರಣಾ ಭರವಸೆ ತೆಗೆದುಹಾಕಿದೆ. ಇತರ ಕ್ವಿಕ್ ಕಾಮರ್ಸ್ ಕಂಪನಿಗಳೂ ಮುಂದಿನ ದಿನಗಳಲ್ಲಿ ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ.
ಈ ಕ್ರಮದ ಉದ್ದೇಶ ಗಿಗ್ ಕಾರ್ಮಿಕರಿಗೆ ಹೆಚ್ಚು ಸುರಕ್ಷತೆ, ಸ್ಥಿರತೆ ಮತ್ತು ಉತ್ತಮ ಕೆಲಸದ ವಾತಾವರಣ ಒದಗಿಸುವುದಾಗಿದೆ. ಇದರ ಭಾಗವಾಗಿ, ಬ್ಲಿಂಕಿಟ್ ತನ್ನ ಟ್ಯಾಗ್‌ಲೈನ್ ಅನ್ನು “10 ನಿಮಿಷಗಳಲ್ಲಿ 10,000+ ಉತ್ಪನ್ನಗಳು” ಎಂಬುದರಿಂದ “30,000+ ಉತ್ಪನ್ನಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ” ಎಂದು ಬದಲಾಯಿಸಿದೆ.


