ಸಾಗರ : ಶಿವಮೊಗ್ಗ: ಖಾಸಗಿ ಬಸ್‌ವೊಂದು ಪಲ್ಟಿಯಾಗಿ ಬಸ್‌ನಲ್ಲಿದ್ದ 28 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆನಂದಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಸಾಗರದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಆನಂದಪುರದ ಬಳಿ ಮಗುಚಿಬಿದ್ದಿದೆ. ಎದುರಿನಿಂದ ಬಂದ ಬಸ್‌ಗೆ ಸೈಡ್ ಕೊಡಲು ಹೋಗಿ ರಸ್ತೆ ಬದಿಗೆ ಮಗುಚಿಕೊಂಡು ಬಿದ್ದಿದೆ. ಬಸ್‌ಗೆ ಅಪಾರ ಹಾನಿಯಾಗಿದ್ದು, ಬಹುತೇಕ ನುಜ್ಜುಗುಜ್ಜಾಗಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ದಾರಿ ಗೋಚರಿಸದೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆನಂದಪುರ ಹಾಗೂ ಸಾಗರ ಉಪವಿಭಾಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

