ವೈಟ್ ಪೇಪರ್ ವಿಶೇಷ,
ಬೆಳಗಾವಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಎಸ್‌ಸಿ ಅಭ್ಯರ್ಥಿ ಆಯ್ಕೆಯಾಗಿರುವ ಇತ್ತೀಚಿನ ವಿರಳ ಉದಾಹರಣೆ ಪ್ರಿಯಾಂಕಾ ಅವರದ್ದು.
ಚಿಕ್ಕೋಡಿ ಲಿಂಗಾಯತ ಪ್ರಾಬಲ್ಯದ ಕ್ಷೇತ್ರ. ಹೀಗಾಗಿ, ಬಿಜೆಪಿ ಈವರೆಗೆ ಸುಲಭವಾಗಿ ಆ ಕ್ಷೇತ್ರವನ್ನು ವಶಪಡಿಸಿಕೊಳ್ಳುತ್ತ ಬಂದಿತ್ತು. ಆದರೆ, ಸತೀಶ್ ಜಾರಕಿಹೊಳಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳುವ ಆಶಯದಿಂದ ಮಗಳಿಗೆ ಟಿಕೆಟ್ ಕೊಡಿಸಿದ್ದರು. ಅಂತೆಯೇ ಸಾಮಾನ್ಯ ಕ್ಷೇತ್ರದಲ್ಲಿ ಮಗಳನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತಾವೊಬ್ಬ ಸಮರ್ಥ ನಾಯಕ ಎಂಬುದನ್ನು ಸಾಭೀತು ಮಾಡಿದ್ದಾರೆ.
ಇನ್ನು ಪ್ರಿಯಾಂಕಾ ತಮ್ಮ ಭಾಷಣ, ಕಾರ್ಯಚಟುವಟಿಕೆಯ ಮೂಲಕ ಅಪ್ಪನನ್ನು ಮೀರಿಸುವ ಮಗಳು ಎಂದು ಹೆಸರು ಪಡೆದಿದ್ದಾರೆ. ಮನೆಮನೆಗೆ ತೆರಳಿ, ಸಮಸ್ಯೆ ಆಲಿಸುವ ಮೂಲಕ ಚುನಾವಣೆಗೆ ಮೊದಲು ಕೂಡ ಜಿಲ್ಲೆಯಲ್ಲಿ ಪ್ರಿಯಾಂಕಾ ಸದ್ದು ಮಾಡಿದ್ದರು. ಸರಳವಾಗಿದ್ದುಕೊಂಡು, ಸಾಮಾನ್ಯರ ಜತೆಗೆ ಬೆರೆತು, ಚುನಾವಣೆಯಲ್ಲಿ ಎರಡು ಬಾರಿ ಎಂಪಿಯಾಗಿದ್ದ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಸೋಲಿಸಿ, ಸಂಸದರಾಗಿದ್ದಾರೆ.
ಚುನಾವಣೆಯಲ್ಲಿ ಭಾಗವಹಿಸಿದಷ್ಟೇ ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಬಡವರ ಮತ್ತು ಕನ್ನಡಿಗರ ದನಿಯಾಗಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ಕ್ಷೇತ್ರದ ಜನತೆಗಿದೆ, ಜಿಲ್ಲೆಯಲ್ಲಿ ಪ್ರಮುಖವಾಗಿರುವ ಗಡಿ ಸಮಸ್ಯೆಗೆ ಕನ್ನಡಿಗರ ಜತೆ ನಿಲ್ಲಬೇಕಾದ ಅನಿವಾರ್ಯತೆಯಿರು ಸಂಸದರು ಚಿಕ್ಕೋಡಿಗೆ ಬೇಕಾಗಿತ್ತು. ಇದೀಗ ಆ ಬಯಕೆ ಈಡೇರಿದೆ. ಮುಂದೆ ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದಷ್ಟೇ ಜನರ ನಿರೀಕ್ಷೆ.
ಪ್ರಿಯಾಂಕಾ ತಮ್ಮ ಮೊದಲ ಪ್ರಯತ್ನದಲ್ಲೇ ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ್ದಾರೆ. ಅವರು, 7,13,461 ಮತಗಳನ್ನು ಪಡೆಯುವ ಮೂಲಕ 90,834 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಣ್ಣಾ ಸಹೇಬ್ ಜೊಲ್ಲೆ 6,22,627 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಆ ಮೂಲಕ ಪ್ರಿಯಾಂಕಾ ಹೊಸದೊಂದು ಸಂಚಲನ ಮೂಡಿಸಿದ್ದು, ಅವರ ಮುಂದಿನ ಕಾರ್ಯವೈಖರಿ ಹೇಗಿರಲಿದೆ ಕಾದು ನೋಡಬೇಕಿದೆ.