ಬೆಂಗಳೂರು: ಪ್ರಾಜೆಕ್ಟ್ ಮೆಜೆಸ್ಟಿಕ್ ಹೆಸರಿನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದ್ದು, ಸಿಂಗಾಪುರಕ್ಕಿಂತಲೂ ಸುಸಜ್ಜಿತ ಬಸ್ ನಿಲ್ದಾಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಮೆಜೆಸ್ಟಿಕ್ ವ್ಯಾಪ್ತಿಯಲ್ಲಿ ಸುಮಾರು 32 ಎಕರೆ ಜಾಗವಿದೆ. ಇಲ್ಲಿ ಸಾವಿರಾರು ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಇದೇ ಸ್ಥಳದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಖಾಸಗಿ ಸಹಭಾಗಿತ್ವದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಹೆಸರಿನಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದ್ದು, ಈ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ವರದಿ ಬಂದ ನಂತರ ಸರಕಾರದ ಹಂತದಲ್ಲಿ ಚರ್ಚೆ ನಡೆಸಿ, ಅನಂತರ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

