ರಾಜಕೀಯ ಸುದ್ದಿ

ವಸತಿ ರಹಿತರಿಗೆ ಮನೆ ಒದಗಿಸುವುದು ಸರ್ಕಾರದ ಆರನೇ ಭರವಸೆ: ಸಚಿವ ಜಮೀರ್ ಅಹ್ಮದ್ ಖಾನ್

Share It

ಹೊಸಪೇಟೆ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಲ್ಲಿ ಜಾರಿಗೆ ತರಲಾಗಿದೆ ಎಂದು ವಕ್ಫ್, ವಸತಿ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಬಡವರು, ಹಿಂದುಳಿದ ವರ್ಗಗಳು ಹಾಗೂ ವಸತಿ ಇಲ್ಲದವರ ಕಲ್ಯಾಣಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, 2026ರ ಅಂತ್ಯದೊಳಗೆ ಎಲ್ಲ ವಸತಿ ರಹಿತರಿಗೆ ಮನೆ ಕಲ್ಪಿಸುವ ಗುರಿ ಹೊಂದಿದೆ. ಇದನ್ನೇ ಸರ್ಕಾರದ ಆರನೇ ಗ್ಯಾರಂಟಿ ಎಂದು ಅವರು ಹೇಳಿದರು.

ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, 2024ರ ಮಾರ್ಚ್ ತಿಂಗಳಲ್ಲಿ ವಿವಿಧ ಯೋಜನೆಗಳಡಿ 36,780 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತ್ತಷ್ಟು 42,345 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಈ ಮೂಲಕ ಒಟ್ಟು ಸುಮಾರು 80 ಸಾವಿರ ಮನೆಗಳು ಜನರಿಗೆ ಲಭಿಸಿವೆ ಎಂದು ವಿವರಿಸಿದರು.

ಸಂಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ₹1,600 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕೊಪ್ಪಳದಲ್ಲಿ ₹1,310 ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ರಾಜೀವ್ ಗಾಂಧಿ ಹಾಗೂ ಆಶ್ರಯ ಯೋಜನೆಗಳ ಮೂಲಕ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಮತ್ತು ವಸತಿ ರಹಿತರಿಗೆ ಸರ್ಕಾರವೇ ನೇರವಾಗಿ ಮನೆ ನಿರ್ಮಿಸಿ ನೀಡಲಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗೆ ಸಮಗ್ರ ವರದಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಬಡವರ ಅನುಕೂಲಕ್ಕಾಗಿ 2016ರಲ್ಲಿ ಬೆಂಗಳೂರಿನಲ್ಲಿ 1,023 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ಯೋಜನೆಗೆ ಮೀಸಲಿಟ್ಟು, ಸ್ವಂತ ಮನೆ ಕಟ್ಟಿಕೊಳ್ಳಲು ಸಹಕಾರ ನೀಡಲಾಗಿದೆ ಎಂದು ಸ್ಮರಿಸಿದರು.

ಪಂಚ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ವರ್ಷಕ್ಕೆ ಸುಮಾರು ₹60 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗಳಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ನೆರವು ದೊರೆತಿದ್ದು, ಅವರ ಆರ್ಥಿಕ ಸ್ಥಿತಿ ಹಾಗೂ ಜೀವನಮಟ್ಟದಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತದೆ ಎನ್ನುವ ಟೀಕೆಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸಾಧಕರಿಗೆ ಗೌರವ

ರಾಜ್ಯ ಯುವ ಸಂಸತ್ ಭವನದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಚಿರು ಅವರಿಗೆ ₹50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಪತ್ರಕರ್ತ ಲಕ್ಷ್ಮಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಗಣರಾಜ್ಯೋತ್ಸವ ಅಂಗವಾಗಿ ಪರೇಡ್ ಕಮಾಂಡರ್ ಗೋವಿಂದ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಭವ್ಯ ಪಥಸಂಚಲನ ನಡೆಯಿತು. ಅಲ್ಲದೆ, ಕನ್ನಡ ಭಾಷೆ, ನಾಡು-ನುಡಿ ಮತ್ತು ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಜನಮನ ಸೆಳೆದವು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎನ್. ರೂಪೇಶಕುಮಾರ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ. ವಿವೇಕಾನಂದ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page